×
Ad

Kalaburagi | ಅನುಗ್ರಹ ಕಣ್ಣಿನ ಆಸ್ಪತ್ರೆಯೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ಶರಣಬಸವ ವಿವಿ

Update: 2026-07-10 18:12 IST

ಕಲಬುರಗಿ : ಶರಣಬಸವ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ನಿಕಾಯ (ಮಹಿಳೆಯರಿಗಾಗಿ ಮಾತ್ರ) ಹಾಗೂ ಕಲಬುರಗಿಯ ವಿಕಾಸನುಮ್ ಶಿಕ್ಷಣ ಮತ್ತು ಕಲ್ಯಾಣ ಟ್ರಸ್ಟ್‌ನ ಘಟಕವಾದ ಅನುಗ್ರಹ ಕಣ್ಣಿನ ಆಸ್ಪತ್ರೆ (ಭೋರುಕಾ ನೇತ್ರಾಲಯ) ನಡುವೆ ಶೈಕ್ಷಣಿಕ ಹಾಗೂ ಕೈಗಾರಿಕಾ ಸಹಯೋಗಕ್ಕಾಗಿ ತಿಳುವಳಿಕೆ ಒಪ್ಪಂದ (ಎಂಒಯು)ಕ್ಕೆ ಸಹಿ ಹಾಕಲಾಗಿದೆ.

ವಿಶ್ವವಿದ್ಯಾಲಯದ ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ ಮಾಕಾ ಮತ್ತು ಅನುಗ್ರಹ ಆಸ್ಪತ್ರೆಯ ಅಧ್ಯಕ್ಷ ಡಾ. ಪ್ರಭುಗೌಡ ಬಿ.ಎಲ್. ಅವರು, ಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ಸಂಸ್ಥಾಪಕ ನಿರ್ದೇಶಕಿ ಡಾ. ಮಾಲಿನಿ ಪ್ರಭುಗೌಡ, ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ಅನಿಲ್ ರೆಡ್ಡಿ, ಬಿಬಿಎ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಕಂದಗೋಳ ಹಾಗೂ ಪ್ರೊ. ನೀರಜ್ ಎಸ್. ತಡಕಲ್ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಒಪ್ಪಂದದ ಮೂಲಕ ಶರಣಬಸವ ವಿಶ್ವವಿದ್ಯಾಲಯದ ಬಿಬಿಎ ವಿದ್ಯಾರ್ಥಿನಿಯರಿಗೆ ಆಸ್ಪತ್ರೆ ಆಡಳಿತ ಮತ್ತು ನಿರ್ವಹಣೆಯ ವಿವಿಧ ಕ್ಷೇತ್ರಗಳಲ್ಲಿ ಪ್ರಾಯೋಗಿಕ ತರಬೇತಿ ಹಾಗೂ ಕೈಗಾರಿಕಾ ಅನುಭವ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.

ಇದರಡಿ ಕೈಗಾರಿಕಾ ಭೇಟಿಗಳು, ಅತಿಥಿ ಉಪನ್ಯಾಸಗಳು, ಕಾರ್ಯಾಗಾರಗಳು ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿನಿಯರ ವೃತ್ತಿಪರ ಕೌಶಲ್ಯ ಮತ್ತು ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಒತ್ತು ನೀಡಲಾಗುತ್ತದೆ.

ಆಸ್ಪತ್ರೆ ಆಡಳಿತ, ಮುಂಭಾಗದ ಕಚೇರಿ ನಿರ್ವಹಣೆ, ಮಾನವ ಸಂಪನ್ಮೂಲ, ರೋಗಿ ಸಂಬಂಧ ನಿರ್ವಹಣೆ, ಮಾರ್ಕೆಟಿಂಗ್, ಹಣಕಾಸು ಹಾಗೂ ಸಾಮಾನ್ಯ ಆಡಳಿತ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕ ಕಲಿಕೆ ಒದಗಿಸಲಾಗುತ್ತದೆ.

ಇದಲ್ಲದೆ, ನಿಯಮಿತ ಕೈಗಾರಿಕಾ ಭೇಟಿಗಳು, ವೀಕ್ಷಣಾ ತರಬೇತಿ, ಅನುಭವಿ ವೃತ್ತಿಪರರಿಂದ ಮಾರ್ಗದರ್ಶನ ಹಾಗೂ ವಿದ್ಯಾರ್ಥಿನಿಯರ ತರಬೇತಿ ಕಾರ್ಯಕ್ಷಮತೆಯ ಮೌಲ್ಯಮಾಪನ ಮತ್ತು ಪ್ರತಿಕ್ರಿಯೆ ನೀಡುವ ವ್ಯವಸ್ಥೆಯೂ ಈ ಒಪ್ಪಂದದ ಭಾಗವಾಗಿದೆ.

ವಿದ್ಯಾರ್ಥಿಗಳ ಯೋಜನೆಗಳು, ಸಂಶೋಧನಾ ಚಟುವಟಿಕೆಗಳು ಹಾಗೂ ಜ್ಞಾನ ವಿನಿಮಯ ಕಾರ್ಯಕ್ರಮಗಳನ್ನು ಉತ್ತೇಜಿಸುವ ಮೂಲಕ ಶೈಕ್ಷಣಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಈ ಎಂಒಯು ನೆರವಾಗಲಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News