×
Ad

Chitapur | ಆಹಾರ ಸೇವಿಸಿ ವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ : ಪ್ರಾಂಶುಪಾಲೆ-ನಿಲಯಪಾಲಕರ ಅಮಾನತು

Update: 2026-07-10 20:11 IST

ಕಲಬುರಗಿ/ಚಿತ್ತಾಪುರ : ತಾಲೂಕಿನ ದಂಡೋತಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಹಾರ ಸೇವಿಸಿದ ಬಳಿಕ 50 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸಂಗಮೇಶ್ವರ ಅವರು ವಸತಿ ಶಾಲೆಗೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪ್ರಭಾರಿ ಪ್ರಾಂಶುಪಾಲೆ ಹಾಗೂ ನಿಲಯಪಾಲಕರನ್ನು ಅಮಾನತುಗೊಳಿಸುವಂತೆ ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ.

ಪರಿಶೀಲನೆ ವೇಳೆ ಅಡುಗೆ ಕೋಣೆ, ಆಹಾರ ಸಂಗ್ರಹಣಾ ಕೊಠಡಿ, ಕುಡಿಯುವ ನೀರಿನ ಘಟಕ, ಶೌಚಾಲಯ, ತರಗತಿ ಕೊಠಡಿಗಳು ಹಾಗೂ ಆಡಳಿತ ಕಚೇರಿ ಸೇರಿದಂತೆ ವಿವಿಧ ವಿಭಾಗಗಳನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿಯಿಂದ ಘಟನೆಯ ಕುರಿತು ವಿವರ ಸಂಗ್ರಹಿಸಿದರು.

ಘಟನೆಯಲ್ಲಿ 50 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಅವರಲ್ಲಿ 39 ಮಂದಿಗೆ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ. ಅಸ್ವಸ್ಥ ವಿದ್ಯಾರ್ಥಿಗಳನ್ನು ಗುಂಡಗುರ್ತಿ ಸರ್ಕಾರಿ ಆಸ್ಪತ್ರೆಗೆ 10, ಚಿತ್ತಾಪುರ ಸಾರ್ವಜನಿಕ ಆಸ್ಪತ್ರೆಗೆ 34, ದಂಡೋತಿ ಆರೋಗ್ಯ ಕೇಂದ್ರಕ್ಕೆ ಒಬ್ಬ ಹಾಗೂ ಕಲಬುರಗಿ ಜಿಲ್ಲಾಸ್ಪತ್ರೆಗೆ ಐವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಈ ವೇಳೆ ತಹಶೀಲ್ದಾರ್ ನಾಗಯ್ಯ ಹಿರೇಮಠ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಕ್ರಂ ಪಾಶಾ ಹಾಗೂ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ಶೇಖ್ ಫೈಯಿಮೋದ್ದಿನ್ ಉಪಸ್ಥಿತರಿದ್ದರು.

ತಪ್ಪಿತಸ್ಥರ ವಿರುದ್ಧ ಕ್ರಮ: ಪ್ರಿಯಾಂಕ್ ಖರ್ಗೆ

ಘಟನೆ ಕುರಿತು ಜಿಲ್ಲಾಡಳಿತದಿಂದ ಮಾಹಿತಿ ಪಡೆದಿರುವುದಾಗಿ ಗೃಹ ಸಚಿವ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಗುರುವಾರ ರಾತ್ರಿ ತಯಾರಿಸಿದ ಅನ್ನ ಸಮರ್ಪಕವಾಗಿ ಬೇಯದಿರುವುದರಿಂದ ಕೆಲ ವಿದ್ಯಾರ್ಥಿಗಳಿಗೆ ಅಜೀರ್ಣ ಸಮಸ್ಯೆ ಉಂಟಾಗಿರುವ ಸಾಧ್ಯತೆ ಇದೆ. ಸಂಪೂರ್ಣ ತನಿಖಾ ವರದಿ ಬಂದ ಬಳಿಕ ನಿರ್ಲಕ್ಷ್ಯ ತೋರಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹಾಸ್ಟೆಲ್‌ಗಳಲ್ಲಿ ಆಹಾರದ ಗುಣಮಟ್ಟ ಕಾಪಾಡುವಂತೆ ಅಧಿಕಾರಿಗಳಿಗೆ ವಿಶೇಷ ಸೂಚನೆ ನೀಡಲಾಗಿದ್ದು, ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಯಾವುದೇ ಲೋಪವಾಗದಂತೆ ಕ್ರಮ ವಹಿಸಲು ನಿರ್ದೇಶಿಸಲಾಗಿದೆ ಎಂದರು.

ಪೋಷಕರ ಆಕ್ರೋಶ

ವಿದ್ಯಾರ್ಥಿನಿಯ ಪೋಷಕಿ ಹಸೀನಾ ಬೇಗಂ ಇಜೇರಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ತಿಳಿದ ಬಳಿಕವೇ ಘಟನೆ ಗೊತ್ತಾಯಿತು. ಪ್ರಾಂಶುಪಾಲರು ಹಾಗೂ ವಾರ್ಡನ್ ಕರೆ ಸ್ವೀಕರಿಸದೇ ನಿರ್ಲಕ್ಷ್ಯ ವಹಿಸಿದ್ದು, ಮಕ್ಕಳ ಆರೋಗ್ಯದಂತಹ ಗಂಭೀರ ವಿಷಯದಲ್ಲೂ ಪೋಷಕರಿಗೆ ಮಾಹಿತಿ ನೀಡದಿರುವುದು ಆತಂಕಕಾರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿಯ ಪೋಷಕ ಮಲ್ಲಿಕಾರ್ಜುನ ಜೇವರ್ಗಿ ಮಾತನಾಡಿ, ಊಟ ಮಾಡಿದ ಕೂಡಲೇ ಮಗನಿಗೆ ಹೊಟ್ಟೆನೋವು ಕಾಣಿಸಿಕೊಂಡಿತು. ವಸತಿ ನಿಲಯದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳ ಕೊರತೆ ಇರುವುದರಿಂದ ಮಗನನ್ನು ಊರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದ್ದೇನೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News