ಕಲಬುರಗಿ| ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಹ ಪರಿಸ್ಥಿತಿ ಅಧ್ಯಯನ ಕಣ್ಣೊರೆಸುವ ನಾಟಕ: ಡಾ.ಉಮೇಶ್ ಜಾಧವ್ ಟೀಕೆ
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಭೀಮಾ ನದಿಯ ಪ್ರವಾಹದಿಂದ ನದಿ ತಟದ ಮೂರು ತಾಲೂಕುಗಳ ಗ್ರಾಮಗಳು ಮುಳುಗಡೆಯಾಗಿ ಜನರು ಸಂತ್ರಸ್ತರಾಗಿ ದಯನೀಯ ಸ್ಥಿತಿಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ಮಾಡುತ್ತಿದ್ದರೂ ಉಸ್ತುವಾರಿ ಸಚಿವರು ದಿಢೀರ್ ಭೇಟಿ ನೀಡಿ ಕಣ್ಣೊರೆಸುವ ತಂತ್ರ ಮಾಡಿ ಬೆಂಗಳೂರು ಸೇರಿದ್ದಾರೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಟೀಕಿಸಿದ್ದಾರೆ.
ಜೇವರ್ಗಿ ತಾಲೂಕಿನ ವಿವಿಧ ಕಡೆಗಳಲ್ಲಿ ರವಿವಾರ ಪ್ರವಾಹ ಪರಿಸ್ಥಿತಿ ಅಧ್ಯಯನ ನಡೆಸಿದ ಬಳಿಕ ಮಾತನಾಡಿದ ಡಾ.ಉಮೇಶ್ ಜಾಧವ್, ಜಿಲ್ಲಾಡಳಿತದಿಂದ ಮತ್ತು ಸರಕಾರದಿಂದ ಯಾವುದೇ ರೀತಿಯ ಸಹಾಯ ಸಹಕಾರಗಳು ಸಂತ್ರಸ್ತ ಜನರಿಗೆ ಮುಟ್ಟುತ್ತಿಲ್ಲ ಎಂಬ ಗೋಳು ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಪ್ರವಾಹ ಪರಿಸ್ಥಿತಿ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವರುಗಳು, ಜಿಲ್ಲಾ ಪ್ರವಾಸ ಮಾಡದ ಬಗ್ಗೆ ರಾಜ್ಯ ಬಿಜೆಪಿ ಟ್ವೀಟ್ ಮಾಡಿದಾಗ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆಯವರು ದಿಢೀರ್ ಆಗಿ ಬಂದು ಜನರ ಅಹವಾಲು ಕೇಳುವ ಬದಲು ಅಧಿಕಾರಿಗಳನ್ನು ಗದರಿಸುವ ಮೂಲಕ ಸರ್ಕಾರ ಜನರೊಂದಿಗೆ ಇದೆ ಎಂಬುದನ್ನು ತೋರಿಸುವ ನಾಟಕವಾಡಿದ್ದಾರೆ. ಇದರಿಂದ ಬೇಸತ್ತ ಸಂತ್ರಸ್ತರು ಜಿಲ್ಲೆಯಲ್ಲಿ ಯುದ್ಧೋಪಾದಿಯ ಪರಿಹಾರ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರಲ್ಲದೆ ಸರ್ಕಾರದಿಂದ ಯಾವ ರೀತಿಯ ನೆರವು ನೀಡುತ್ತಿವೆ ಎಂಬ ಪ್ರಶ್ನೆಗೆ ಉತ್ತರವಿಲ್ಲದೆ ಸಚಿವರು ಮೌನವಾಗಿ ಬೆಂಗಳೂರಿಗೆ ಕಾಲ್ಕಿತ್ತಿದ್ದಾರೆ ಎಂದು ಡಾ.ಜಾಧವ್ ಖಾರವಾಗಿ ಟೀಕಿಸಿದ್ದಾರೆ.
ಅಫಜಲಪುರ ತಾಲೂಕಿನಲ್ಲಿ ಸಂತ್ರಸ್ತರನ್ನು ಭೇಟಿ ಮಾಡಲು ತೆರಳಿದ ಜಿಲ್ಲಾಧಿಕಾರಿಗಳ ಕಾಲಿಗೆ ಬಿದ್ದ ಸಂತ್ರಸ್ತರು ಪರಿಹಾರ ನೀಡಿ ರಕ್ಷಿಸಿ ಎಂದು ಬೇಡಿಕೊಂಡಿದ್ದು, ಸರಕಾರದ ಹೀನಾಯ ಸ್ಥಿತಿಗೆ ನಿದರ್ಶನವಾಗಿದೆ. ಸೇಡಂ ತಾಲೂಕಿನ ಸುಮಖೇಡ್ ತಾಂಡಾದಲ್ಲಿ ಬಾಣಂತಿ ಹೆಣ್ಣು ಮಗಳು ಮತ್ತು ಕುಟುಂಬ ಇಡೀ ರಾತ್ರಿ ಮನೆಯ ಛಾವಣಿಯ ಮೇಲೆ ರಕ್ಷಣೆ ಪಡೆದ ವರದಿಯಾಗಿದ್ದರೂ ಪರಿಹಾರದ ಕ್ರಮ ಕೈಗೊಳ್ಳದೆ ಆಡಳಿತ ತೆಪ್ಪಗೆ ಕುಳಿತಿದೆ ಎಂದು ಆರೋಪಿಸಿದರು.
ಅಫಜಲಪುರ, ಜೇವರ್ಗಿ, ಚಿತ್ತಾಪುರ, ಚಿಂಚೋಳಿ ಮುಂತಾದ ತಾಲೂಕುಗಳಲ್ಲಿ ಪ್ರವಾಹ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಅನೇಕ ಮನೆಗಳು ನೆಲೆಸಮವಾಗಿ ಜೀವನೋಪಾಯದ ಕಾಳುಕಡ್ಡಿಗಳು ನೀರು ಪಾಲಾಗಿದ್ದರೂ ಸರಿಯಾದ ಕಾಳಜಿ ಕೇಂದ್ರಗಳ ನಿರ್ವಹಣೆ ಇಲ್ಲದೆ ಮತ್ತು ಪರಿಹಾರ ಕ್ರಮ ಕೈಗೊಳ್ಳದೆ ತೀವ್ರ ಸಂಕಷ್ಟ ಎದುರಾಗಿದ್ದು ಉಸ್ತುವಾರಿ ಸಚಿವರು ಕೇವಲ ಮಾಧ್ಯಮಗಳ ಮುಂದೆ ಪೋಸ್ ನೀಡುವ ಮೂಲಕ ಸಂತ್ರಸ್ತರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಜವಾದ ಕಾಳಜಿ ಇದ್ದರೆ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಠಿಕಾಣಿ ಹೂಡಿ ಪರಿಸ್ಥಿತಿಯ ಕೂಲಂಕಷ ಅಧ್ಯಯನ ಹಾಗೂ ಸೂಕ್ತ ನೆರವಿಗೆ ಅಧಿಕಾರಿಗಳನ್ನು ಬಳಸುವ ಬದಲು ವೃಥಾರೋಪ ಮಾಡುವುದನ್ನು ಕೈಬಿಡಬೇಕು. ಮಾನ್ಯ ಜಿಲ್ಲಾಧಿಕಾರಿಯವರು ಹಗಲಿರುಳು ಶ್ರಮಿಸಿರುವುದರಿಂದ ಕನಿಷ್ಠ ಸೌಲಭ್ಯವಾದರೂ ಸಂತ್ರಸ್ತ ಜನರಿಗೆ ಮುಟ್ಟುತ್ತಿದೆ. ಜಿಲ್ಲಾಧಿಕಾರಿಗಳಿಗೆ ಜಾತಿ ಗಣತಿ ನಿರ್ವಹಣೆಯ ಹೊಣೆ ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿ ಹೊರಿಸಿರುವುದರಿಂದ ಒತ್ತಡದಲ್ಲಿ ಅತಿವೃಷ್ಟಿ ಪರಿಹಾರ ಕ್ರಮ ಕೈಗೊಳ್ಳುವಲ್ಲಿ ಕಷ್ಟಕರವಾಗುತ್ತಿದೆ. ಆದರೆ ಇಷ್ಟೆಲ್ಲ ಸಮಸ್ಯೆಗಳನ್ನು ಗಮನಿಸಿದ ಉಸ್ತುವಾರಿ ಸಚಿವರು ಕೇವಲ ಬಾಯಿ ಮಾತಿನ ಸಾಂತ್ವನವನ್ನು ಹೇಳಿ ಬೆಂಗಳೂರಿಗೆ ಪಲಾಯನ ಗೊಂಡಿರುವುದು ಹಾಸ್ಯಸ್ಪದವಾಗಿದೆ ಎಂದು ಹೇಳಿದರು.
ಬಿಜೆಪಿ ನಿಯೋಗವು ಕೋನ ಹಿಪ್ಪರ್ಗ ಜೇವರ್ಗಿ, ಕೋಬಾಳ, ಕೊಡಿ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅಧ್ಯಯನ ಕೈಗೊಂಡಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಅಶೋಕ್ ಬಗಲಿ, ಶಿವರಾಜ ರದ್ದೆವಾಡಗಿ ಇದ್ದರು.