ಸೆ.7 ರಂದು ಅಫಜಲಪುರದಲ್ಲಿ ಕಬ್ಬು ಬೆಳೆಗಾರರ ಪ್ರಥಮ ಸಮ್ಮೇಳನ
ಅಫಜಲಪುರ: ಟನ್ ಕಬ್ಬಿಗೆ 5,000 ರೂ. ಬೆಲೆ ನಿಗದಿಪಡಿಸುವುದು, ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘ, ಅಫಜಲಪುರ ತಾಲೂಕು ಘಟಕದ ವತಿಯಿಂದ ಸೆಪ್ಟೆಂಬರ್ 7ರಂದು (ಸೋಮವಾರ) ಅಫಜಲಪುರದ ಶೆಟ್ಟಿ ಫಂಕ್ಷನ್ ಹಾಲ್‌ನಲ್ಲಿ ಕಬ್ಬು ಬೆಳೆಗಾರರ ಪ್ರಥಮ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡರಾದ ಶ್ರೀಮಂತ ಬಿರಾದಾರ, ರಮೇಶ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದು ತಿಳಿಸಿದರು.
ರೈತ ಮುಖಂಡ ಗುರು ಚಾಂದಕವಟೆ ಹಾಗೂ ಭೀಮರಾಯ ಗೌರ ಮಾತನಾಡಿ, 8.5% ಸಕ್ಕರೆ ಇಳುವರಿ ಆಧಾರದಲ್ಲಿ ಪ್ರತಿ ಟನ್ ಕಬ್ಬಿಗೆ 5,000 ರೂ. ಬೆಲೆ ನಿಗದಿಪಡಿಸುವುದು, ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸುವುದು, ಕಟಾವು ಹಾಗೂ ಸಾಗಾಣಿಕೆ ವೆಚ್ಚಕ್ಕೆ ಸಂಬಂಧಿಸಿದಂತೆ ಕಾರ್ಖಾನೆ ಮತ್ತು ರೈತರ ನಡುವೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಮಿತಿ ರಚಿಸುವುದು, ಸಕ್ಕರೆ ಇಳುವರಿ ಘೋಷಣೆ ಮತ್ತು ತೂಕದಲ್ಲಿ ನಡೆಯುತ್ತಿರುವ ಅಕ್ರಮ ತಡೆಗಟ್ಟಲು ರೈತರನ್ನೊಳಗೊಂಡ ತಾಂತ್ರಿಕ ಸಮಿತಿ ರಚಿಸುವುದು ಎಂದು ಹೇಳಿದರು.
ತಾಲೂಕಿನಲ್ಲಿ ಕೆರೆ ತುಂಬುವ ಯೋಜನೆ ಅವೈಜ್ಞಾನಿಕವಾಗಿದೆ, ಅದನ್ನು ಮರು ಪರಿಶೀಲನೆ ಮಾಡಿ ಹೂಳೆತ್ತಿ ಕೆರೆ ತುಂಬ ಬೇಕು, ಕಾಲುವೆಗಳಿಗೆ ಕಾಡಾ ಗೇಟ ಹಾಕಿ ಕೊನೆ ಹಳ್ಳಿಗಳಿಗೆ ನೀರು ತಲುಪಿಸಬೇಕು ಹಾಗೂ ಉಜನಿ ಜಲಾಶಯದ ನೀರು ತರವುದಕ್ಕೆ ಸರಕಾರದ ಮೇಲೆ ಸಮ್ಮೇಳನದಲ್ಲಿ ಹಕ್ಕು ಒತ್ತಾಯಕ್ಕೆ ಆಗ್ರಹಿಸಲಾಗುವುದು ಎಂದರು.
ಮುಖಂಡ ನಾಮದೇವ ಕಡಕೋಳ ಮಾತನಾಡಿ, ಅಫಜಲಪುರ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಪಿಆರ್, ರೇಣುಕಾ ಹಾಗೂ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗಳು ರಾಜ್ಯ ಸರ್ಕಾರದ ಆದೇಶದಂತೆ ಕಳೆದ ಸಾಲಿನ ಬಾಕಿ ಹಣವನ್ನು ತಕ್ಷಣ ಪಾವತಿಸುವುದು, ಹಾಗೂ ಕಬ್ಬು ಸಾಗಾಣಿಕೆ ವಾಹನಗಳ ತೂಕವನ್ನು ಮುಖ್ಯ ದ್ವಾರದಲ್ಲೇ ಮಾಡುವಂತೆ ತೂಕದ ಯಂತ್ರ ಅಳವಡಿಸುವುದು ಮತ್ತು ಒಂದು ಟನ್ ಕಬ್ಬು ಬೆಳೆಯಲು ರಸಗೊಬ್ಬರ, ಕ್ರಿಮಿನಾಶಕ, ಕೂಲಿ, ನೀರಾವರಿ, ಜಮೀನು ಬಾಡಿಗೆ, ಕಟಾವು ಮತ್ತು ಸಾಗಾಣಿಕೆ ಸೇರಿದಂತೆ ಸುಮಾರು ₹3,500ಕ್ಕೂ ಹೆಚ್ಚು ವೆಚ್ಚವಾಗುತ್ತಿದೆ ಎಂದು ಕೃಷಿ ಆಯೋಗ ಹೇಳಿದ ಎಂದ ಅವರು ಆದರೆ ಕೇಂದ್ರ ಸರ್ಕಾರ ಘೋಷಿಸಿರುವ ಎಫ್‌ಆರ್‌ಪಿ (FRP) ರೈತರಿಗೆ ನ್ಯಾಯ ಒದಗಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುರುಗೇಂದ್ರ ಮಸಳಿ, ಅಣ್ಣರಾಯಗೌಡ ಪಾಟೀಲ ಮಾತನಾಡಿದರು.