ಕಲಬುರಗಿ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದರೂ ಶಿಕ್ಷಕರನ್ನು ಬದಲಿಸಿ ಬೋಧನೆ ಮಾಡಲು ಸಾಧ್ಯವಿಲ್ಲ. ಎಐ ಪ್ರಶ್ನೆಗಳಿಗೆ ಉತ್ತರ ನೀಡಬಹುದು, ಆದರೆ ಮಕ್ಕಳಲ್ಲಿ ಪ್ರಶ್ನಿಸುವ ಸಾಮರ್ಥ್ಯ ಮತ್ತು ವೈಚಾರಿಕ ಚಿಂತನೆ ಬೆಳೆಸಲು ಶಿಕ್ಷಕರೇ ಅಗತ್ಯ ಎಂದು ರಾಜ್ಯದ ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆದ 2026-27ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣ ಬಿತ್ತುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಎಐ ಬಂದರೂ ಶಿಕ್ಷಕರ ಜವಾಬ್ದಾರಿ ಕಡಿಮೆಯಾಗುವುದಿಲ್ಲ, ಬದಲಿಗೆ ಇನ್ನಷ್ಟು ಹೆಚ್ಚುತ್ತದೆ ಎಂದರು.

ಸ್ಮಾರ್ಟ್ ಕ್ಲಾಸ್ ನಿರ್ಮಿಸಿದರೆ ಮಾತ್ರ ಮಕ್ಕಳು ಸ್ಮಾರ್ಟ್ ಆಗುವುದಿಲ್ಲ. ಮಕ್ಕಳಿಗೆ ಪುರಾಣ, ಪ್ರವಚನಗಳ ಜೊತೆಗೆ ವೈಜ್ಞಾನಿಕ ಚಿಂತನೆ, ಕುತೂಹಲ ಮತ್ತು ಪ್ರಶ್ನಿಸುವ ಧೈರ್ಯವನ್ನು ಬೆಳೆಸುವ ಶಿಕ್ಷಣ ನೀಡಿದಾಗ ಮಾತ್ರ ಅವರು ನಿಜವಾದ ಅರ್ಥದಲ್ಲಿ ಸ್ಮಾರ್ಟ್ ಆಗುತ್ತಾರೆ ಎಂದು ಹೇಳಿದರು.

ಪ್ರಬುದ್ಧ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಉತ್ತಮ ನಾಗರಿಕರನ್ನು ರೂಪಿಸುವ ಮೂಲಕವೇ ಉತ್ತಮ ಸಮಾಜ ಮತ್ತು ದೇಶ ನಿರ್ಮಾಣ ಸಾಧ್ಯ. ಶಿಕ್ಷಕರ ಸಂಘದ ಗುರುಭವನ ಬೇಡಿಕೆಗೆ ಸ್ಪಂದಿಸಿ, ನಿವೇಶನವನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ 2026-27ನೇ ಸಾಲಿನ ಜಿಲ್ಲಾ ಮಟ್ಟದ 24 ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಾಥಮಿಕ ಶಾಲಾ ವಿಭಾಗದ 16 ಹಾಗೂ ಪ್ರೌಢಶಾಲಾ ವಿಭಾಗದ 8 ಶಿಕ್ಷಕರು ಪ್ರಶಸ್ತಿ ಸ್ವೀಕರಿಸಿದರು. ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ನಿಂಗಪ್ಪ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಪ್ರಶಸ್ತಿ ಪುರಸ್ಕೃತ ಪ್ರಾಥಮಿಕ ವಿಭಾಗದ ಶಿಕ್ಷಕರು :

ಅಫಜಲಪುರ ತಾಲೂಕಿನ ಬಿದನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಮುಖ್ಯಗುರು ರಾಘವಚಾರ್ಯ ಆರ್. ಜೋಶಿ, ಅಫಜಲಪೂರ ಪಿ.ಎಂ.ಶ್ರೀ ಸರ್ಕಾರಿ ಕನ್ಯಾ ಮಾದರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಚೆನ್ನಮ್ಮ ಗುಣಾರಿ, ಆಳಂದ ತಾಲೂಕಿನ ಬಿಲಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಚಂದ್ರಕಾಂತ ಎನ್. ಬಬಲಾದಕರ್, ಸಾವಳೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಮಹಾದೇವ ಬಿ. ಗುಣಕಿ, ಚಿಂಚೋಳಿ ತಾಲೂಕಿನ ಅಂತಾವರಂ ತೆಲುಗು ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ದಶರಥ, ಏತೆ ಬಾರಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸಂಗ್ರಾಮಪ್ಪ ಉಚ್ಚೇದ, ಚಿತ್ತಾಪುರ ತಾಲೂಕಿನ ಗೋಟೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಶಂಕರ ಧೂಳಪ್ಪ ಭಾವಿಮನಿ ಮತ್ತು ಕೊಲ್ಲೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ರಾಧಿಕಾ ಹೊಸೂರ, ಕಲಬುರಗಿ ಉತ್ತರ ತಾಲೂಕಿನ ಕಲಬುರಗಿ ಶೇಖ ರೋಜಾ ಉರ್ದು ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪರಮೇಶ್ವರ ಹೆಚ್. ಕುಂಬಾರ ಮತ್ತು ಕನವಳ್ಳಿ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ನಿಂಗಪ್ಪ ಬಿ.ಪೂಜಾರಿ, ಕಲಬುರಗಿ ದಕ್ಷಿಣ ತಾಲೂಕಿನ ಫರಹತಾಬಾದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸರಸ್ವತಿ ಲಚ್ಯಾಣ, ಯಳವಂತಗಿ (ಕೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸೂರ್ಯಕಾಂತ ನಿಂಬರ್ಗಾ ಹಾಗೂ ಕಲಬುರಗಿ ಜಗತ್ ಪ್ರದೇಶದ ಶ್ರೀ ಮೈಲಾರಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಸಿದ್ದಪ್ಪ ಶರಣಪ್ಪ ಹೂಗಾರ, ಜೇವರ್ಗಿ ತಾಲೂಕಿನ ಮಂದರವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಅನಿತಾ ಕಾಂಬಳೆ, ಸೇಡಂ ತಾಲೂಕಿನ ಸೇಡಂ ಪಟ್ಟಣದ ರೆಹಮತ್ ನಗರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ನಿಶಾತ್ ಫಾತೀಮಾ ಮತ್ತು ಕೋಲಕುಂದಾ ದೊಡ್ಡ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ವಿಜಯಕುಮಾರ.

ಪ್ರಶಸ್ತಿ ಪುರಸ್ಕೃತ ಪ್ರೌಢ ಶಾಲಾ ಶಿಕ್ಷಕರು :

ಆಳಂದ ತಾಲೂಕಿನ ಹಿರೋಳ್ಳಿ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕಿ ಪಾಟೀಲ ಲಕ್ಷ್ಮೀ, ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಸರ್ಕಾರಿ ಆದರ್ಶ ವಿದ್ಯಾಲಯದ ಸಹ ಶಿಕ್ಷಕ ವಹಾಬ್ ಪಟೇಲ್, ಚಿತ್ತಾಪುರ ತಾಲೂಕಿನ ಭೀಮನಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಅಪ್ಪಯ್ಯ ಎಸ್. ಹಿರೇಮಠ, ಕಲಬುರಗಿ ಉತ್ತರ ತಾಲೂಕಿನ ಕಲ್ಲಹಂಗರಗಾ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕಿ ಸಂಗೀತಾ ಠಾಕೂರ, ಕಲಬುರಗಿ ದಕ್ಷಿಣ ತಾಲೂಕಿನ ಫರಹತಾಬಾದ ಸರ್ಕಾರಿ ಪ್ರೌಢ ಶಾಲೆಯ ವೃ. ಶಿಕ್ಷಕಿ ಅಂಬುಜಾ ದೇಶಪಾಂಡೆ, ಅಫಜಲಪುರ ತಾಲೂಕಿನ ದೇವಲಗಾಣಗಾಪುರ (ಅನುದಾನಿತ) ತಿಪ್ಪಣ್ಣ ಕಂಟೆಪ್ಪ ಹೇರೂರ ಪ್ರೌಢಶಾಲೆಯ ಮುಖ್ಯಗುರು ರಾಜಶೇಖರ ತಂದೆ ಶ್ರೀಮಂತ, ಜೇವರ್ಗಿ ತಾಲೂಕಿನ ಕೂಡಿದರ್ಗಾ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಸೋಮಶೇಖರ ಹಿರೇಮಠ ಹಾಗೂ ಸೇಡಂ ತಾಲೂಕಿನ ಮುಧೋಳ ಕನ್ಯಾ ಕೆ.ಪಿ.ಎಸ್. ಪ್ರೌಢ ಶಾಲೆಯ ಸಹ ಶಿಕ್ಷಕ ಹನುಮಂತ ರೆಡ್ಡಿ.

ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ‌ ನಿಯಮಿತದ ಅಧ್ಯಕ್ಷರು ಮತ್ತು ಕಲಬುರಗಿ ಉತ್ತರ ಶಾಸಕಿ‌ ಕನೀಜ್ ಫಾತೀಮಾ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕೆ.ಕೆ.ಆರ್.ಟಿ.ಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಕುಡಾ‌ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ‌ ಸಂಕನೂರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಡಿ.ಡಿ.ಪಿ.ಐ ಶಂಕ್ರೆಮ್ಮ ಡವಳಗಿ ಸೇರಿದಂತೆ ಶಿಕ್ಷಕ ಸಂಘದ ಪ್ರತಿನಿಧಿಗಳು, ನೂರಾರು ಸಂಖ್ಯೆಯಲ್ಲಿ ಶಿಕ್ಷಕ ವೃಂದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇದಕ್ಕೂ ಮುನ್ನ ಸಂಪನ್ಮೂಲ ವ್ಯಕ್ತಿ ಜಗನ್ನಾಥ ರಾವ್ ಅವರು ಶಿಕ್ಷಕರ ವೃತ್ತಿ ಬದುಕು ಕುರಿತು ಉಪನ್ಯಾಸ ನೀಡಿದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor