Kalaburagi | ಸೆ.17ರಂದು ಕೆಬಿಎನ್ ವಿಶ್ವವಿದ್ಯಾಲಯದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸಾಂದರ್ಭಿಕ ಚಿತ್ರ
ಕಲಬುರಗಿ: ಖ್ವಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಸೈಯದ್ ಮುಹಮ್ಮದ್ ಅಲಿ ಅಲ್-ಹುಸೈನಿ ಅವರ ಜನ್ಮದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 17ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಗರದ ವಿವಿಧೆಡೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆರೋಗ್ಯ ಜಾಗೃತಿ ಅಭಿಯಾನ ಆಯೋಜಿಸಲಾಗಿದೆ.
ವಿಶ್ವವಿದ್ಯಾಲಯದ ಐಕ್ಯೂಎಸಿ (IQAC), ವೈದ್ಯಕೀಯ ವಿಜ್ಞಾನಗಳ ನಿಕಾಯ ಹಾಗೂ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದಲ್ಲಿ ನಡೆಯುವ ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸಮಾಲೋಚನೆ, ಕಣ್ಣಿನ ತಪಾಸಣೆ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಪರೀಕ್ಷೆ, ಔಷಧ ವಿತರಣೆ, ಗರ್ಭಿಣಿಯರ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಸೇರಿದಂತೆ ಹಲವು ಸೇವೆಗಳು ಲಭ್ಯವಿರಲಿವೆ.
ಶಿಬಿರಗಳು UHTC ಖಾಜಾ ಬಜಾರ್, ಸೋನಿಯಾ ಗಾಂಧಿ ಕಾಲೋನಿಯ ಮಸ್ಜಿದ್-ಎ-ದಾಯಿ ಹಲೀಮಾ, ಕಮಾರ್ ಕಾಲೋನಿಯ ನೆಹಾ ಉರ್ದು ಹೈಯರ್ ಪ್ರೈಮರಿ ಸ್ಕೂಲ್ ಹಾಗೂ ಎಂ.ಎಸ್.ಕೆ. ಮಿಲ್‌ನ ಶಹ್ಜೀಲಾನಿ ಶಾದಿ ಮಹಲ್‌ನಲ್ಲಿ ನಡೆಯಲಿವೆ.
ಇದರೊಂದಿಗೆ ಸಿಪಿಆರ್ (CPR) ತರಬೇತಿ, ಕೈಗಳ ಸ್ವಚ್ಛತೆ, ದಂತ ಸ್ವಚ್ಛತೆ ಹಾಗೂ ಋತುಚಕ್ರದ ನೈರ್ಮಲ್ಯ ಕುರಿತು ಆರೋಗ್ಯ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ರಕ್ತದಾನ ಶಿಬಿರವು UHTC ಖಾಜಾ ಬಜಾರ್ ಹಾಗೂ ಕೆಬಿಎನ್ ಆಸ್ಪತ್ರೆಯಲ್ಲಿ, ಗರ್ಭಿಣಿಯರ ಆರೋಗ್ಯ ತಪಾಸಣೆ ಕೆಬಿಎನ್ ಆಸ್ಪತ್ರೆಯಲ್ಲಿ ನಡೆಯಲಿದೆ.
ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಿ, ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಹಾಗೂ ಅಗತ್ಯ ಆರೋಗ್ಯ ಸೇವೆಗಳನ್ನು ಸುಲಭವಾಗಿ ತಲುಪಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಪ್ರತಿವರ್ಷ ಈ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಸಚಿವ ಮೀರ್ ವಿಲಾಯತ್ ಅಲಿ ತಿಳಿಸಿದ್ದಾರೆ.