Kalaburagi | ಸೆ.17ರಂದು ಮುಖ್ಯಮಂತ್ರಿಗಳಿಂದ 24 ಕೆಕೆಆರ್ಟಿಸಿಯ ನೂತನ ಬಸ್ಸುಗಳಿಗೆ ಚಾಲನೆ
ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್‌ಟಿಸಿ) 24 ನೂತನ ಬಸ್‌ಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ ಎಂದು ನಿಗಮದ ಮುಖ್ಯ ಯಾಂತ್ರಿಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಕೆಆರ್‌ಟಿಸಿ 33.35 ಕೋಟಿ ರೂ. ವೆಚ್ಚದಲ್ಲಿ ಒಟ್ಟು 56 ನೂತನ ಬಸ್‌ಗಳ ಖರೀದಿಗೆ ಆದೇಶ ನೀಡಿದ್ದು, ಮೊದಲ ಹಂತದಲ್ಲಿ 24 ಬಸ್‌ಗಳನ್ನು ಸೇವೆಗೆ ಸೇರ್ಪಡೆಗೊಳಿಸಲಾಗುತ್ತಿದೆ. ಈ ಪೈಕಿ 20 ನಾನ್ ಎಸಿ ಸ್ಲೀಪರ್, 20 ಎಸಿ ಸ್ಲೀಪರ್ ಹಾಗೂ 16 ಎಸಿ ಸೀಟರ್ ಬಸ್‌ಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ.
ನೂತನ ಬಸ್‌ಗಳನ್ನು AIS-052, AIS-119 ಮತ್ತು AIS-153 ಆಟೋಮೋಟಿವ್ ಸುರಕ್ಷತಾ ಮಾನದಂಡಗಳಂತೆ ನಿರ್ಮಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಸ್ವಯಂಚಾಲಿತ ಅಗ್ನಿಶಾಮಕ ವ್ಯವಸ್ಥೆ, ವೆಹಿಕಲ್ ಟ್ರ್ಯಾಕಿಂಗ್, ಪ್ಯಾನಿಕ್ ಬಟನ್, ರಿವರ್ಸ್ ಪಾರ್ಕಿಂಗ್ ಅಲಾರ್ಮ್ ಹಾಗೂ ಎಲ್‌ಇಡಿ ಡಿಸ್ಪ್ಲೇ ಬೋರ್ಡ್ ಅಳವಡಿಸಲಾಗಿದೆ.
ನಾನ್ ಎಸಿ ಸ್ಲೀಪರ್ ಬಸ್‌ನಲ್ಲಿ 30 ಮಲಗುವ ಆಸನಗಳು, ಎಸಿ ಸ್ಲೀಪರ್ ಬಸ್‌ನಲ್ಲಿ 36 ಮಲಗುವ ಆಸನಗಳು ಹಾಗೂ ಎಸಿ ಸೀಟರ್ ಬಸ್‌ನಲ್ಲಿ 40 ರಿಕ್ಲೈನಿಂಗ್ ಆಸನಗಳು ಇರಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಆಲ್ ವೀಲ್ ಏರ್ ಸಸ್ಪೆನ್ಷನ್, ನಾಲ್ಕು ಸಿಸಿಟಿವಿ ಕ್ಯಾಮೆರಾಗಳು, ಪ್ರತಿಯೊಂದು ಸೀಟ್ ಬಳಿ ರೀಡಿಂಗ್ ಲ್ಯಾಂಪ್ ಹಾಗೂ ಮೊಬೈಲ್ ಚಾರ್ಜಿಂಗ್ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ನಿಗಮ ತಿಳಿಸಿದೆ.