ಕ್ರೀಡೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ದಾರಿದೀಪ : ಶಾಸಕ ಬಿ.ಆರ್.ಪಾಟೀಲ್
ಆಳಂದ ತಾಲೂಕು ಮಟ್ಟದ ಶಾಲಾ ಕ್ರೀಡಾಕೂಟ: ವಿಜೇತರಿಗೆ ಶಾಸಕರಿಂದ ಬಹುಮಾನ ವಿತರಣೆ
ಆಳಂದ: ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳು ಮತ್ತು ತಂಡಗಳಿಗೆ ಶಾಸಕ ಬಿ.ಆರ್.ಪಾಟೀಲ್ ಬಹುಮಾನ ವಿತರಿಸಿ ಅಭಿನಂದಿಸಿದರು.
ಕ್ರೀಡಾಕೂಟದ ಅಂಗವಾಗಿ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಕ್ರೀಡೆ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪ್ರಮುಖ ಆಧಾರವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ತಾಲೂಕಿನ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾ ತಂಡಗಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದವು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.
ಕ್ರೀಡಾಕೂಟದಲ್ಲಿ ವಿಜೇತರಾದ ಮೂರು ಗುಂಪುಗಳಿಗೆ ಶಾಸಕ ಬಿ.ಆರ್. ಪಾಟೀಲ ಸಾಂಕೇತಿಕವಾಗಿ ಬಹುಮಾನ ವಿತರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳನ್ನು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಮಾಡಿ ಕಳುಹಿಸಲಾಯಿತು.
ಕಾರ್ಯಕ್ರಮದಲ್ಲಿ ಸಮನ್ವಯಾಧಿಕಾರಿ ಅಣ್ಣಪ್ಪ ಹಾದಿಮನಿ, ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದತ್ತಪ್ಪ ಬಡಗೇರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಮುಖರು ಹಾಗೂ ಪರೀಕ್ಷಾ ನೋಡಲ್ ಅಧಿಕಾರಿ ಪಂಕಜ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಶೈಲ ದೇವರಾಯ, ಸುರೇಶ ಕವಲಗಿ, ಶಂಭುಲಿಂಗ, ವಿರೂಪಾಕ್ಷಯ್ಯ ಸ್ವಾಮಿ, ಸತೀಶ ಕೋಕನೂರೆ, ದೇವಿಂದ್ರ ಜಗದಿ, ಮಹಿಬೂಬಸಾಬ, ಮಹಾಂತೇಶ ಮಲಶೆಟ್ಟಿ, ಸಂಗೀತಾ ಡಿ.ಜೆ., ಸುವರ್ಣ ಮಂಟಕಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶರಣಬಸಪ್ಪ ವಡಗಾಂವ ಅವರು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.