‘ನನಗೆ ಆರೆಸ್ಸೆಸ್‌ನ ಹೆದರಿಕೆ ಇಲ್ಲ; ನನ್ನ ಬಗ್ಗೆ ಅವರಿಗೆ ಹೆದರಿಕೆ ಇದೆ’ : ಸಚಿವ ಪ್ರಿಯಾಂಕ್ ಖರ್ಗೆ

"ಆರೆಸ್ಸೆಸ್ ಕೋಮು ಗಲಭೆ ಸೃಷ್ಟಿಸುವ ಸಂಘಟನೆ ಹೊರತು, ರಕ್ಷಿಸುವ ಸಂಸ್ಥೆಯಲ್ಲ"

Update: 2026-08-15 20:18 IST

ಕಲಬುರಗಿ: “ನನಗೆ ಆರೆಸ್ಸೆಸ್‌ನ ಯಾವುದೇ ಹೆದರಿಕೆ ಇಲ್ಲ. ಬದಲಾಗಿ ನನ್ನ ಬಗ್ಗೆ ಅವರಿಗೆ ತುಂಬಾ ಹೆದರಿಕೆ ಇದೆ” ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್‌ನ ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಪಾತ್ರದ ಕುರಿತು ಬಿಜೆಪಿ ಮತ್ತು ಆರೆಸ್ಸೆಸ್ ಮುಖಂಡರನ್ನು ಪ್ರಶ್ನಿಸಿದರು.

ಆರೆಸ್ಸೆಸ್‌ ಬಗ್ಗೆ ಸಂತೋಷ್ ಜಿ. ಅವರು ಅಲ್ಲಲ್ಲಿ ಮಾತನಾಡಿ ಉತ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರಿಗೆ ಇತಿಹಾಸದ ಅರಿವಿಲ್ಲ. ವಾಟ್ಸ್‌ಆ್ಯಪ್ ವಿಶ್ವವಿದ್ಯಾಲಯದಲ್ಲಿ ಹರಡುವ ಮಾಹಿತಿಯನ್ನು ಹೇಳುವುದು ಮಾತ್ರ ಅವರಿಗೆ ಗೊತ್ತು ಎಂದು ಟೀಕಿಸಿದರು.

ದಂಡಿ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ ಸೇರಿದಂತೆ ಸ್ವಾತಂತ್ರ್ಯ ಸಂಗ್ರಾಮದ ಯಾವ ಹೋರಾಟದಲ್ಲಿ ಆರೆಸ್ಸೆಸ್ ಅಧಿಕೃತವಾಗಿ ಭಾಗವಹಿಸಿತ್ತು ಎಂಬುದನ್ನು ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರು ಸ್ಪಷ್ಟಪಡಿಸಲಿ ಎಂದು ಪ್ರಶ್ನಿಸಿದರು. ದುಂಡುಮೇಜಿನ ಸಭೆ ಹಾಗೂ ‘ಸೈಮನ್ ಗೋ ಬ್ಯಾಕ್’ ಚಳವಳಿಯಲ್ಲಿ ಭಾಗವಹಿಸಿದ್ದಾರೆಯೇ ಎಂದು ಕೇಳಿದರು.

ಕಾಂಗ್ರೆಸ್‌ನ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ 500 ಜನರ ಪಟ್ಟಿಯನ್ನು ನೀಡುವುದಾಗಿ ಹೇಳಿದ ಅವರು, ಆರೆಸ್ಸೆಸ್‌ನಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಕನಿಷ್ಠ 50 ಜನರ ಪಟ್ಟಿಯನ್ನು ನೀಡಲಿ ಎಂದು ಸವಾಲು ಹಾಕಿದರು.

ವಿಡಿ ಸಾವರ್ಕರ್ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ಸಾವರ್ಕರ್ ಅವರು ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದರು. ರತ್ನಗಿರಿಯಲ್ಲಿ ಇದ್ದಾಗ ಪಿಂಚಣಿ ಸಾಲುತ್ತಿಲ್ಲ, ಹೆಚ್ಚಿಸಬೇಕು ಎಂದು ಅಲ್ಲಿನ ಡಿ.ಸಿ ಅವರಿಗೆ ಪತ್ರ ಬರೆದಿದ್ದರು ಎಂದು ಆರೋಪಿಸಿದರು. “ಸಾವರ್ಕರ್ ಅವರಿಗೆ ‘ವೀರ’ ಎಂಬ ಬಿರುದನ್ನು ನೀಡಿದವರು ಯಾರು? ಎಂಬ ಪ್ರಶ್ನೆಯನ್ನು ಸದನದಲ್ಲಿ ಕೇಳಿದ್ದರೂ ಬಿಜೆಪಿಯವರು ಈವರೆಗೆ ಉತ್ತರಿಸಿಲ್ಲ. ಸಾವರ್ಕರ್ ತಮ್ಮನ್ನು ತಾವೇ ‘ವೀರ’ ಎಂದು ಕರೆದುಕೊಂಡಿರುವುದು ಇತಿಹಾಸದಿಂದ ತಿಳಿದುಬರುತ್ತದೆ” ಎಂದರು.

ಸುಭಾಷ್‌ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿಗೆ ಸೇರದಂತೆ ಹೇಳಿದ್ದ ಸಾವರ್ಕರ್, ಬ್ರಿಟಿಷರ ಸೇನೆಗೆ ಸೇರಲು ಕರೆ ನೀಡಿದ್ದರು ಎಂದು ಆರೋಪಿಸಿದರು.

‘ಆರೆಸ್ಸೆಸ್ ಕೋಮು ಗಲಭೆ ಸೃಷ್ಟಿಸುವ ಸಂಘಟನೆ’ :

ದೇಶ ವಿಭಜನೆಯ ನಂತರ ನಡೆದ ಕೋಮು ಗಲಭೆಗಳ ಸಂದರ್ಭದಲ್ಲಿ ಆರೆಸ್ಸೆಸ್‌ನ ಪಾತ್ರದ ಕುರಿತು ಪ್ರಶ್ನಿಸಿದ ಅವರು, “ಸಾವರ್ಕರ್ ಶಿಷ್ಯ ನಾಥೂರಾಮ್ ಗೋಡ್ಸೆ ಆರೆಸ್ಸೆಸ್ ಪ್ರೇರಣೆ ಇಟ್ಟುಕೊಂಡೆ ದ್ವೇಷದಿಂದ ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ. ಕೋಮು ಗಲಭೆ ಸೃಷ್ಟಿಸುವ ಸಂಘಟನೆಯಾಗಿ ಆರೆಸ್ಸೆಸ್‌ನ್ನು ನೋಡಬೇಕೇ ಹೊರತು, ಕೋಮು ಸೌಹಾರ್ದವನ್ನು ರಕ್ಷಿಸುವ ಸಂಸ್ಥೆಯಾಗಿ ಅಲ್ಲ” ಎಂದು ಟೀಕಿಸಿದರು.

ಖರ್ಗೆ ಕುಟುಂಬ ಬೀದರ್‌ನಿಂದ ಕಲಬುರಗಿಗೆ ಬಂದ ಸಂದರ್ಭದಲ್ಲಿ ಆರೆಸ್ಸೆಸ್ ನೆರವು ನೀಡಿತ್ತು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಭಾಗವನ್ನು ರಕ್ಷಿಸಿದವರು ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಭಾರತೀಯ ಸೇನೆಯವರು. ಆರೆಸ್ಸೆಸ್‌ನವರಲ್ಲ ಎಂದು ಹೇಳಿದರು.

560ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಗ್ಗೂಡಿಸಿ ಭಾರತವನ್ನು ಏಕೀಕರಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಜವಾಹರಲಾಲ್ ನೆಹರೂ ಪ್ರಮುಖ ಪಾತ್ರ ವಹಿಸಿದ್ದಾರೆ. ದೇಶವನ್ನು ಒಗ್ಗೂಡಿಸುವ ಹೋರಾಟದಲ್ಲಿ ಆರೆಸ್ಸೆಸ್‌ನ ಕೊಡುಗೆಯ ಉದಾಹರಣೆ ನೀಡಲಿ ಎಂದು ಸವಾಲು ಹಾಕಿದರು.

ವಿಧೇಯಕದಲ್ಲಿ ಸಂಘಟನೆ ನಿಷೇಧದ ಪ್ರಸ್ತಾಪವಿಲ್ಲ :

ಹೊಸದಾಗಿ ಜಾರಿಗೆ ತರಲು ಉದ್ದೇಶಿಸಿರುವ ವಿಧೇಯಕದ ಕುರಿತು ಮಾತನಾಡಿದ ಅವರು, ಯಾವುದೇ ಸಂಸ್ಥೆ, ಸಂಘಟನೆ ಅಥವಾ ರಾಜಕೀಯ ಪಕ್ಷದ ಹೆಸರನ್ನು ವಿಧೇಯಕದಲ್ಲಿ ಉಲ್ಲೇಖಿಸಲಾಗಿಲ್ಲ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳ ಆದೇಶಗಳನ್ನು ಆಧರಿಸಿಯೇ ವಿಧೇಯಕ ರೂಪಿಸಲಾಗಿದೆ ಎಂದರು.

ಯಾವುದೇ ಸಂಸ್ಥೆ ಅಥವಾ ಸಂಘಟನೆಯನ್ನು ನಿಷೇಧಿಸುವುದಾಗಿ ಬಿಲ್‌ನಲ್ಲಿ ಹೇಳಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಕಾನೂನುಬದ್ಧ ಅನುಮತಿ ಹಾಗೂ ನಿಯಮಗಳನ್ನು ಪಾಲಿಸುವುದು ಅಗತ್ಯ ಎಂದು ಹೇಳಿದರು.

ಆರೆಸ್ಸೆಸ್‌ಗೆ ಅಧಿಕೃತ ನೋಂದಣಿ ಇಲ್ಲ ಎಂಬ ವಿಚಾರವನ್ನು ಪ್ರಸ್ತಾಪಿಸಿದ ಅವರು, ನೋಂದಣಿಯಾಗಿಲ್ಲದ ಸಂಸ್ಥೆಯನ್ನು ಹೇಗೆ ನಿಷೇಧಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಇತ್ತೀಚಿನ ಶಂಕಿತ ಭಯೋತ್ಪಾದಕರು ಚಟುವಟಿಕೆಗಳ ಕುರಿತು ಮಾತನಾಡಿದ ಅವರು, ಶಂಕಿತ ಭಯೋತ್ಪಾದಕರಲ್ಲಿ ಕನ್ನಡಿಗರು ಇಲ್ಲ; ಉತ್ತರ ಪ್ರದೇಶ ಹಾಗೂ ಉತ್ತರ ಭಾರತದ ಭಾಗದವರು ಇದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್‌, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ, ಜಗದೇವ ಗುತ್ತೇದಾರ್, ಕುಡಾ ಅಧ್ಯಕ್ಷ ಮಝಾರ್ ಖಾನ್ ಆಲಂ ಹಾಗೂ ಮಹಾನಗರ ಪಾಲಿಕೆ ಮೇಯರ್ ವರ್ಷಾ ಜಾನೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News