Kalaburagi | ಅನುವಾದ ಸಾಹಿತ್ಯದ ಮೂಲಕ ಭಾಷೆ–ಸಂಸ್ಕೃತಿಗಳ ನಡುವೆ ಸೇತುವೆ ನಿರ್ಮಾಣ: ಪ್ರಭಾಕರ ಜೋಶಿ

ಡಾ.ಅಂಬುಜಾ ಮಳಖೇಡಕರ ಅನುವಾದಿಸಿದ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭ

Update: 2026-08-15 19:52 IST

ಕಲಬುರಗಿ: ಸುವನಾ ಪ್ರಕಾಶನದ ವತಿಯಿಂದ ಡಾ. ಅಂಬುಜಾ ಮಳಖೇಡಕರ ಅವರು ಅನುವಾದಿಸಿದ ಮೂರು ಮಹತ್ವದ ಕೃತಿಗಳ ಬಿಡುಗಡೆ ಸಮಾರಂಭವು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಸ್ವಾತಂತ್ರ್ಯೋತ್ಸವದ ಸಂಭ್ರಮದ ದಿನದಂದು ನಡೆದ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ವಿವಿಧ ಭಾಷೆಗಳಲ್ಲಿನ ಮಹತ್ವದ ಕೃತಿಗಳನ್ನು ಕನ್ನಡ ಹಾಗೂ ಹಿಂದಿ ಓದುಗರಿಗೆ ಪರಿಚಯಿಸುವ ಪ್ರಯತ್ನಕ್ಕೆ ಚಾಲನೆ ದೊರೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಪ್ರಭಾಕರ ಜೋಶಿ, ಅನುವಾದ ಸಾಹಿತ್ಯವು ವಿವಿಧ ಭಾಷೆ, ಸಂಸ್ಕೃತಿ ಹಾಗೂ ಚಿಂತನೆಗಳ ನಡುವೆ ಸೇತುವೆ ನಿರ್ಮಿಸುವ ಮಹತ್ವದ ಕಾರ್ಯವಾಗಿದೆ. ಇಂತಹ ಪ್ರಯತ್ನಗಳು ಸಾಹಿತ್ಯದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತವೆ ಎಂದು ಹೇಳಿದರು.

ಡಾ. ಶಶಿಧರ ನರೇಂದ್ರ ಅವರು ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿ, ವಿವಿಧ ಭಾಷೆಗಳಲ್ಲಿರುವ ಮಹತ್ವದ ಕೃತಿಗಳನ್ನು ಅನುವಾದದ ಮೂಲಕ ಓದುಗರಿಗೆ ತಲುಪಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ವಾಸುದೇವ ಸೇಡಂ ಅವರು ‘ರಾಷ್ಟ್ರವೀರ ಸ್ವಾಮಿ ರಮಾನಂದತೀರ್ಥ’ ಕೃತಿಯನ್ನು ಪರಿಚಯಿಸಿದರು. ಡಾ. ಎಸ್. ಮಂಜುನಾಥ ಅವರು ‘ಜನವರಿ 26’ ಹಾಗೂ ‘ಆತ್ಮಕವಚ’ ಕೃತಿಗಳ ಕುರಿತು ಮಾತನಾಡಿದರು. ಅನುವಾದವು ಕೇವಲ ಭಾಷಾಂತರವಲ್ಲ; ಒಂದು ಸಂಸ್ಕೃತಿಯ ಚಿಂತನೆಗಳನ್ನು ಮತ್ತೊಂದು ಭಾಷೆಯ ಓದುಗರಿಗೆ ತಲುಪಿಸುವ ಸೃಜನಾತ್ಮಕ ಸೇತುವೆಯಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಡಾ. ಎಸ್.ಎಸ್. ಗುಬ್ಬಿ, ಸುನಂದಾ ಕುಲಕರ್ಣಿ, ಅವಿನಾಶ್ ಕುಲಕರ್ಣಿ, ಸುಮನ ಮಳಖೇಡಕರ, ನಂದಕಿಶೋರ ಮಳಖೇಡಕರ, ನಾರಾಯಣ ಜೋಶಿ, ಅನಿತಾ ಸುಬೇದಾರ, ಸುಮಂಗಲಾ ಚಕ್ರವರ್ತಿ, ಶಿವರಾಜ ಅಂಡಗಿ ಸೇರಿದಂತೆ ಸಾಹಿತ್ಯಾಸಕ್ತರು, ಲೇಖಕರು, ಕಲಾವಿದರು, ಅಧ್ಯಾಪಕರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

ಪ್ರಸಾದ್ ಅಷ್ಟಗಿ ಕಾರ್ಯಕ್ರಮ ನಿರೂಪಿಸಿದರು.

ಸುವನಾ ಪ್ರಕಾಶನದ ಮೂಲಕ ವಿವಿಧ ಮಹತ್ವದ ಕೃತಿಗಳನ್ನು ಓದುಗರಿಗೆ ತಲುಪಿಸುವ ಡಾ. ಅಂಬುಜಾ ಮಳಖೇಡಕರ ಅವರ ಸಾಹಿತ್ಯಿಕ ಹಾಗೂ ಅನುವಾದ ಕ್ಷೇತ್ರದ ಪ್ರಯತ್ನವನ್ನು ಗಣ್ಯರು ಶ್ಲಾಘಿಸಿದರು. ಮೂರು ಕೃತಿಗಳ ಬಿಡುಗಡೆಯೊಂದಿಗೆ ಕಾರ್ಯಕ್ರಮವು ಸಾಹಿತ್ಯಾಸಕ್ತರಲ್ಲಿ ವಿಶೇಷ ಆಸಕ್ತಿ ಮೂಡಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News