Kalaburagi | ವಿಕಸಿತ ಭಾರತ ನಿರ್ಮಾಣದಲ್ಲಿ ಯುವಜನತೆ, ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು: ಪ್ರೊ. ಬಟ್ಟು ಸತ್ಯನಾರಾಯಣ
ಬೃಹತ್ ತಿರಂಗಾ ಯಾತ್ರೆ, ಸಸಿ ನೆಡುವ ಅಭಿಯಾನ
ಕಲಬುರಗಿ: ವಿಕಸಿತ ಭಾರತ @2047 ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಯುವ ಸಮುದಾಯದ ಮೇಲೆ ವಿಶೇಷ ಜವಾಬ್ದಾರಿಯಿದ್ದು, ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಅರಿತು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕರೆ ನೀಡಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಆಡಳಿತ ಭವನದ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
1947ರ ಭಾರತಕ್ಕೂ ಇಂದಿನ ಭಾರತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಶಿಕ್ಷಣ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ವೈದ್ಯಕೀಯ, ರಕ್ಷಣಾ ಕ್ಷೇತ್ರ ಹಾಗೂ ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೇಶ ಗಮನಾರ್ಹ ಪ್ರಗತಿ ಸಾಧಿಸಿದೆ. ಈ ಪ್ರಗತಿಯನ್ನು ಮತ್ತಷ್ಟು ವೇಗಗೊಳಿಸಿ 2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ, ಸಂಶೋಧನೆ, ನಾವೀನ್ಯತೆ, ಸೃಜನಶೀಲತೆ ಹಾಗೂ ಜ್ಞಾನ ಸೃಷ್ಟಿಯ ಕೇಂದ್ರಗಳಾಗಬೇಕು. ಪ್ರಾಧ್ಯಾಪಕರು ಕೂಡ ಕಾಲಕ್ಕೆ ತಕ್ಕಂತೆ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
5 ಕಿ.ಮೀ. ಬೃಹತ್ ತಿರಂಗಾ ಯಾತ್ರೆ :
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಆಡಳಿತ ಭವನದಿಂದ ಮುಖ್ಯ ದ್ವಾರದವರೆಗೆ ಸುಮಾರು 5 ಕಿ.ಮೀ. ಬೃಹತ್ ತಿರಂಗಾ ಯಾತ್ರೆ ನಡೆಯಿತು. ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದು, ಯಾತ್ರೆಯುದ್ದಕ್ಕೂ ದೇಶಭಕ್ತಿಯ ಘೋಷಣೆಗಳು ಮೊಳಗಿದವು.
‘ವಂದೇ ಮಾತರಂ’ 150ನೇ ವರ್ಷಾಚರಣೆ :
ವಿಶ್ವವಿದ್ಯಾಲಯದ ಬಹುಉಪಯೋಗಿ ಸಭಾಂಗಣದಲ್ಲಿ ಸಾರ್ವಜನಿಕ ಸಮಾರಂಭ ಹಾಗೂ ‘ವಂದೇ ಮಾತರಂ’ ಗಾಯನದೊಂದಿಗೆ 150ನೇ ವರ್ಷಾಚರಣೆಯನ್ನು ಆಚರಿಸಲಾಯಿತು. ಭಾಷಾವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೋಟ ಸಾಯಿಕೃಷ್ಣ ವಿಶೇಷ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳಿಂದ ದೇಶಭಕ್ತಿ ಹಾಗೂ ಭಾರತದ ಸಾಂಸ್ಕೃತಿಕ ವೈವಿಧ್ಯವನ್ನು ಪ್ರತಿಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕ್ಯಾಂಪಸ್‌ನಲ್ಲಿ ಸಸಿ ನೆಡುವ ಅಭಿಯಾನ :
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಯಿತು. ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ನೇತೃತ್ವದಲ್ಲಿ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್, ಕಾರ್ಯಕ್ರಮ ಸಂಯೋಜಕ ಪ್ರೊ. ಬಸವರಾಜ ಎಂ. ಕುಬಕಡ್ಡಿ, ಡಾ. ಗಣಪತಿ ಬಿ. ಸಿನ್ನೂರ್, ಡಾ. ರಂಗನಾಥ ಗಂಗಿನೇನಿ ಸೇರಿದಂತೆ ವಿವಿಧ ನಿಕಾಯಗಳ ಡೀನ್‌ಗಳು, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಶ್ರೀಲಕ್ಷ್ಮಿ ಮತ್ತು ಡಾ. ವೈಷ್ಣವಿ ನಾರಾಯಣಿ ಕಾರ್ಯಕ್ರಮ ನಿರೂಪಿಸಿದರು.