Kalaburagi | ವಿದ್ಯಾರ್ಥಿಗಳು ಜ್ಞಾನ, ಚಾರಿತ್ರ್ಯ, ಬದ್ಧತೆ ಬೆಳೆಸಿಕೊಳ್ಳಬೇಕು: ಪ್ರೊ.ಶಶಿಕಾಂತ್ ಉಡಿಕೇರಿ

Update: 2026-08-15 19:50 IST

ಕಲಬುರಗಿ: ವಿದ್ಯಾರ್ಥಿಗಳು ರಾಷ್ಟ್ರದ ಅತ್ಯಮೂಲ್ಯ ಸಂಪನ್ಮೂಲವಾಗಿದ್ದು, ಜ್ಞಾನ, ಚಾರಿತ್ರ್ಯ ಹಾಗೂ ಬದ್ಧತೆ ಎಂಬ ಮೂರು ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಹೇಳಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂಭಾಗದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಅನೇಕ ದೇಶಪ್ರೇಮಿಗಳು ಹಾಗೂ ರಾಷ್ಟ್ರ ನಾಯಕರ ತ್ಯಾಗದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಅವರ ತ್ಯಾಗವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ದೇಶದ ಅಭಿವೃದ್ಧಿ ಹಾಗೂ ಯುವ ಸಮೂಹದ ಬೆಳವಣಿಗೆಗಾಗಿ ಪ್ರಾಮಾಣಿಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯವನ್ನು ಅರಿತುಕೊಂಡು, ಸಮಾಜ ಹಾಗೂ ರಾಷ್ಟ್ರದ ಜವಾಬ್ದಾರಿಯನ್ನು ಗೌರವಿಸಬೇಕು ಎಂದರು.

ಕಲ್ಯಾಣ ಕರ್ನಾಟಕದ ಗ್ರಾಮೀಣ ಭಾಗಗಳು, ಸಮುದಾಯಗಳು, ಕುಟುಂಬಗಳು ಹಾಗೂ ವಿದ್ಯಾರ್ಥಿ ಸಮೂಹದ ಭವಿಷ್ಯದ ಬೆಳವಣಿಗೆಗೆ ವಿಶೇಷ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಮೇಲೆ ಮಹತ್ವದ ಜವಾಬ್ದಾರಿಯಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ‘ಏನು ಯೋಚಿಸಬೇಕು’ ಎಂಬುದಕ್ಕಿಂತ ‘ಹೇಗೆ ಯೋಚಿಸಬೇಕು’ ಎಂಬುದನ್ನು ಕಲಿಸುವ ಮೂಲಕ ಅವರನ್ನು ಉತ್ತಮ ಸಾಧನೆಗೆ ಪ್ರೋತ್ಸಾಹಿಸಬೇಕು. ಜ್ಞಾನ, ಚಾರಿತ್ರ್ಯ ಹಾಗೂ ಬದ್ಧತೆಯೊಂದಿಗೆ ಬೆಳೆದು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ಎನ್.ಜಿ. ಕಣ್ಣೂರು, ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕ ಹಾಗೂ ಡಾ. ಹನುಮಂತ ಜಂಗೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯರು, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ದಶರಥ ನಾಯಕ್, ಕಲಾ ನಿಕಾಯದ ಡೀನ್ ಪ್ರೊ. ಎಚ್.ಟಿ. ಪೋತೆ, ಶಿಕ್ಷಣ ನಿಕಾಯದ ಡೀನ್ ಪ್ರೊ. ಹೂವಿನಬಾವಿ ಬಾಬಣ್ಣ, ಕಾನೂನು ನಿಕಾಯದ ಡೀನ್ ಪ್ರೊ. ದೇವಿದಾಸ ಮಾಲೆ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ. ಟಿ. ಶಂಕರಪ್ಪ, ಪ್ರೊ. ವಿದ್ಯಾಸಾಗರ ಸೇರಿದಂತೆ ಎಲ್ಲಾ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಗೀತ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸಂಗೀತ ಗಾಯನ ನಡೆಸಿಕೊಟ್ಟರು. ವಿಶ್ವವಿದ್ಯಾಲಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಹನುಮಂತ ಜಂಗೆ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಸೂರ್ಯಕಾಂತ ಅಮರೆ ವಂದಿಸಿದರು. ಡಾ. ಎಂ.ಬಿ. ಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News