ಕಲಬುರಗಿ: ಬೆಳೆ ಹಾನಿ ಶೇ.90ರಿಂದ 100ರಷ್ಟಿದ್ದರೂ ಶೇ.40ರಿಂದ 50ರಷ್ಟು ಮಾತ್ರ ಪರಿಗಣಿಸಲು ಶಿಫಾರಸು ಮಾಡಿರುವ ಇಂಡಸ್‌ಇಂಡ್ ವಿಮಾ ಕಂಪನಿಯ ಕ್ರಮ ಖಂಡನೀಯ. ರೈತರಿಗೆ ನ್ಯಾಯಯುತ ಪರಿಹಾರ ನೀಡದಿದ್ದರೆ ಕಂಪೆನಿ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಶಾಸಕ ಬಿ.ಆರ್. ಪಾಟೀಲ್ ಎಚ್ಚರಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಈ ವರ್ಷ ಭೀಕರ ಬರಗಾಲದಿಂದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಬರ ಪರಿಹಾರ ಕೋರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಕೇಂದ್ರದ ಬರ ಅಧ್ಯಯನ ತಂಡವೂ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ರಾಜ್ಯ ವಿಪತ್ತು ನಿರ್ವಹಣೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಯಮಗಳಡಿ 22,458 ಕೋಟಿ ಪರಿಹಾರ ಕೋರಿ ಅ.2ರಂದು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಬೆಳೆ ವಿಮೆ ವಿತರಣೆ ಹೊಣೆ ಹೊತ್ತಿರುವ ಇಂಡಸ್‌ಇಂಡ್ ವಿಮಾ ಕಂಪನಿಯು ಮುಂಗಾರು ಮತ್ತು ಹಿಂಗಾರು ಬೆಳೆಗಳು ಶೇ.90ರಿಂದ 100ರಷ್ಟು ಹಾನಿಯಾಗಿದ್ದರೂ ಸೂಕ್ತ ಪರಿಹಾರ ನೀಡಲು ಹಿಂದೇಟು ಹಾಕುತ್ತಿದೆ. ಬದಲಾಗಿ, ಕೇವಲ ಶೇ.40ರಿಂದ 50ರಷ್ಟು ಬೆಳೆ ಹಾನಿಯನ್ನು ಮಾತ್ರ ಪರಿಗಣಿಸುವಂತೆ ಭಾರತೀಯ ಕೃಷಿ ವಿಮಾ ನಿಗಮಕ್ಕೆ (ಎಐಸಿ) ಶಿಫಾರಸು ಮಾಡಿದೆ ಎಂಬ ವರದಿಗಳಿವೆ. ರಾಜ್ಯ ಸರ್ಕಾರವಾಗಲಿ, ಎಐಸಿಯಾಗಲಿ ಕಂಪನಿಯ ಈ ಶಿಫಾರಸನ್ನು ಒಪ್ಪಿಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.

ಬೆಳೆ ವಿಮೆ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿರುವಂತೆ 375 ಕೋಟಿ ಮಧ್ಯಂತರ ಪರಿಹಾರ ಒದಗಿಸುತ್ತಿರುವುದು ಸ್ವಾಗತಾರ್ಹ. ಆದರೆ, ರೈತರಿಗೆ ಪೂರ್ಣ ಪ್ರಮಾಣದ ನ್ಯಾಯಯುತ ಪರಿಹಾರ ದೊರೆಯಬೇಕು. ಇಲ್ಲವಾದಲ್ಲಿ ಇಂಡಸ್‌ಇಂಡ್ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅಗತ್ಯಬಿದ್ದರೆ ಕಂಪನಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದ್ದಾರೆ.

ಜಿಲ್ಲಾಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ವಿಮಾ ಕಂಪನಿಯ ಶಿಫಾರಸನ್ನು ಪರಿಗಣಿಸದೆ, ರೈತರಿಗೆ ನ್ಯಾಯಯುತ ಬೆಳೆ ವಿಮೆ ಪರಿಹಾರ ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಬಿ.ಆರ್. ಪಾಟೀಲ್‌ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಜಿದ್‌ ಅಲಿ/ವಾರ್ತಾಭಾರತಿ

ಕಲಬುರಗಿ ಜಿಲ್ಲಾ ವರದಿಗಾರರು

ಸಾಜಿದ್ ಅಲಿ ಅವರು 12 ವರ್ಷಗಳ ಪತ್ರಿಕೋದ್ಯಮ ಅನುಭವ ಹೊಂದಿದ್ದಾರೆ. ವಾರ್ತಾಭಾರತಿ ಮಂಗಳೂರು ಡೆಸ್ಕ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಇವರು, ಕಳೆದ ಏಳು ವರ್ಷಗಳಿಂದ ವಾರ್ತಾಭಾರತಿ ಡಿಜಿಟಲ್ ವೆಬ್‌ಸೈಟ್‌ನ ಕಲಬುರಗಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಕೋಆರ್ಡಿನೇಟರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ