ಕಲಬುರಗಿ: ಜಿಲ್ಲೆಯ ಚಿಂಚೋಳಿ ಸಿದ್ದಸಿರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ 2026-27ನೇ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಮೀಸಲು ಪ್ರದೇಶದಲ್ಲಿ ಕಬ್ಬು ಬೆಳೆಯುವ ರೈತರ ಹಿತದೃಷ್ಟಿಯಿಂದ, ಆ ಪ್ರದೇಶದ ಕಬ್ಬನ್ನು ಬೇರೆ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸಿ ನುರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್ ಆದೇಶಿಸಿದ್ದಾರೆ.

ಸಿದ್ದಸಿರಿ ಸಕ್ಕರೆ ಕಾರ್ಖಾನೆಯ ವ್ಯಾಪ್ತಿಗೆ ಬರುವ ಚಿಂಚೋಳಿ ತಾಲೂಕಿನ ಗ್ರಾಮಗಳನ್ನು ಆಳಂದ ತಾಲೂಕಿನ ಭೂಸನೂರಿನ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗೆ, ಕಾಳಗಿ ತಾಲೂಕಿನ ಗ್ರಾಮಗಳನ್ನು ಅಫಜಲಪುರದ ರೇಣುಕಾ ಸಕ್ಕರೆ ಕಾರ್ಖಾನೆಗೆ ಹಾಗೂ ಚಿತ್ತಾಪುರ ಮತ್ತು ಸೇಡಂ ತಾಲೂಕಿನ ಗ್ರಾಮಗಳನ್ನು ಅಫಜಲಪುರ ತಾಲೂಕಿನ ಚಿಣಮಗೇರಾದ ಕೆಪಿಆರ್ ಸಕ್ಕರೆ ಕಾರ್ಖಾನೆಗೆ ಪ್ರಸಕ್ತ ಸಾಲಿಗೆ ಅನ್ವಯವಾಗುವಂತೆ ಹಂಚಿಕೆ ಮಾಡಿ ಆದೇಶಿಸಲಾಗಿದೆ.

ಆಯಾ ಸಕ್ಕರೆ ಕಾರ್ಖಾನೆಗಳಿಗೆ ಹಂಚಿಕೆ ಮಾಡಿರುವ ಗ್ರಾಮಗಳ ರೈತರು ಬೆಳೆದ ಕಬ್ಬನ್ನು ಕಾರ್ಖಾನೆಗಳವರು ಸಕಾಲದಲ್ಲಿ ಕಟಾವು ಮಾಡಿಕೊಂಡು ಹೋಗಬೇಕು. ಅಲ್ಲದೆ, ನಿಗದಿಪಡಿಸಿದ ದರದಂತೆ ಕಾಲಮಿತಿಯೊಳಗೆ ರೈತರಿಗೆ ಹಣ ಪಾವತಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿದ್ದಾರೆ.

ಭಯಪಡಬೇಡಿ, ಸಕಾಲದಲ್ಲಿ ಕಬ್ಬು ಕಟಾವು :

ಚಿಂಚೋಳಿ, ಕಾಳಗಿ, ಸೇಡಂ ಹಾಗೂ ಚಿತ್ತಾಪುರ ತಾಲೂಕಿನ ರೈತರು ಕಬ್ಬು ನುರಿಸುವ ಕುರಿತು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್ ತಿಳಿಸಿದ್ದಾರೆ.

ಚಿಂಚೋಳಿ ಭಾಗದ ಕಬ್ಬು ನುರಿಸಲು ಆದೇಶಿಸಲಾದ ಸಕ್ಕರೆ ಕಾರ್ಖಾನೆಗಳು ಅಗತ್ಯ ಟೋಲಿಗಳನ್ನು ಸಿದ್ಧಪಡಿಸಿಕೊಳ್ಳುತ್ತಿವೆ. ಈ ಕಾರ್ಖಾನೆಗಳು ಡಿಸೆಂಬರ್ ಮೊದಲ ವಾರದಲ್ಲಿ ಚಿಂಚೋಳಿ ಮತ್ತು ಕಾಳಗಿ ಭಾಗದ ರೈತರ ಕಬ್ಬು ನುರಿಸಲು ಟೋಲಿಗಳನ್ನು ವ್ಯವಸ್ಥೆ ಮಾಡಿ ಕಟಾವು ಕಾರ್ಯ ಆರಂಭಿಸಲಿವೆ. ಆದ್ದರಿಂದ ರೈತರು ಯಾವುದೇ ಆತಂಕಕ್ಕೊಳಗಾಗದೆ ತಮಗೆ ಹಂಚಿಕೆ ಮಾಡಿರುವ ಕಾರ್ಖಾನೆಗಳವರು ಕಬ್ಬು ಕಟಾವು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಜಿದ್‌ ಅಲಿ/ವಾರ್ತಾಭಾರತಿ

ಕಲಬುರಗಿ ಜಿಲ್ಲಾ ವರದಿಗಾರರು

ಸಾಜಿದ್ ಅಲಿ ಅವರು 12 ವರ್ಷಗಳ ಪತ್ರಿಕೋದ್ಯಮ ಅನುಭವ ಹೊಂದಿದ್ದಾರೆ. ವಾರ್ತಾಭಾರತಿ ಮಂಗಳೂರು ಡೆಸ್ಕ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಇವರು, ಕಳೆದ ಏಳು ವರ್ಷಗಳಿಂದ ವಾರ್ತಾಭಾರತಿ ಡಿಜಿಟಲ್ ವೆಬ್‌ಸೈಟ್‌ನ ಕಲಬುರಗಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಕೋಆರ್ಡಿನೇಟರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ