ಸಮಸಮಾಜ ನಿರ್ಮಾಣಕ್ಕೆ ಅರಸು ತತ್ವಗಳು ಅಳವಡಿಸಿಕೊಳ್ಳಿ: ಬಾಬುರಾವ್ ಫುಲಾರ
ಆಳಂದ: ಶಿಕ್ಷಣ, ಸಂಘಟನೆ ಹಾಗೂ ಹಕ್ಕುಗಳ ಅರಿವಿನ ಮೂಲಕ ಹಿಂದುಳಿದ ವರ್ಗಗಳ ಜನರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲರಾಗಬೇಕು. ಸಂಘಟಿತ ಶಕ್ತಿಯ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಂಡು, ಡಿ. ದೇವರಾಜ ಅರಸು ಅವರು ಕಂಡಿದ್ದ ಸಾಮಾಜಿಕ ನ್ಯಾಯದ ಸಮಾಜ ನಿರ್ಮಾಣದ ಕನಸನ್ನು ನನಸಾಗಿಸಬೇಕು ಎಂದು ಹಿರಿಯ ಮುಖಂಡ ಬಾಬುರಾವ್ ಫುಲಾರ ಕರೆ ನೀಡಿದರು.
ಪಟ್ಟಣದ ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ ಅವರ ನಿವಾಸದಲ್ಲಿ ಹಿಂದುಳಿದ ವರ್ಗಗಳ ತಾಲೂಕು ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಗೆ ವಿಶೇಷ ಆದ್ಯತೆ ನೀಡಿದ ದೂರದೃಷ್ಟಿಯ ನಾಯಕರು. ಅವರ ಆಡಳಿತದ ಫಲವಾಗಿ ಸಮಾಜದ ದುರ್ಬಲ ವರ್ಗಗಳ ಜನರಲ್ಲಿ ಆತ್ಮವಿಶ್ವಾಸ ಮೂಡಿತು. ಹಿಂದುಳಿದವರು ಸಮಾಜದ ಮುಖ್ಯವಾಹಿನಿಗೆ ಬರಲು ಹಲವು ಅವಕಾಶಗಳು ದೊರೆತವು. ಇಂತಹ ಮಹಾನ್ ನಾಯಕನ ತತ್ವಗಳನ್ನು ಕೇವಲ ಜಯಂತಿ ದಿನದಂದು ಸ್ಮರಿಸುವುದಕ್ಕಿಂತ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ಫುಲಾರ ಹೇಳಿದರು.
ಹಿಂದುಳಿದ ವರ್ಗಗಳ ಜನರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಣವು ಸಾಮಾಜಿಕ ಬದಲಾವಣೆ ಹಾಗೂ ಆರ್ಥಿಕ ಸ್ವಾವಲಂಬನೆಗೆ ಪ್ರಮುಖ ಸಾಧನವಾಗಿದೆ. ಯುವಕರು ಸರ್ಕಾರದ ಸೌಲಭ್ಯಗಳು, ಮೀಸಲಾತಿ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಮುಖಂಡ ಭೀಮಾಶಂಕರ ಜಮಗಿ, ಹಿಂದುಳಿದವರ ಬದುಕಿಗೆ ಸಾಮಾಜಿಕ ನ್ಯಾಯದ ಬೆಳಕು ನೀಡಿದ ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಪಾಲಿಗೆ ಮಹಾನ್ ನಾಯಕರು. ಅವರ ಜನಪರ ಆಡಳಿತ ಹಾಗೂ ಸಾಮಾಜಿಕ ಕಳಕಳಿಯನ್ನು ಇಂದಿನ ಪೀಳಿಗೆ ಅರ್ಥಮಾಡಿಕೊಂಡು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದರು.
ರಮೇಶ ಲೋಹಾರ ಮಾತನಾಡಿ, ಹಿಂದುಳಿದ ವರ್ಗಗಳ ಸಮುದಾಯದಲ್ಲಿ ಒಗ್ಗಟ್ಟು ಬೆಳೆಸುವುದು ಇಂದಿನ ಅಗತ್ಯವಾಗಿದೆ. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಜಾಗೃತಿ ಮೂಡಿಸಬೇಕು. ಶಿಕ್ಷಣ, ಉದ್ಯೋಗ, ಉದ್ಯಮ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು.