ಸೇಡಂ | ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಅತಿಥಿಗಳ ಆಹ್ವಾನದಲ್ಲಿ ತಾರತಮ್ಯ ಆರೋಪ: ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ

Update: 2026-08-20 21:10 IST

ಸೇಡಂ: ತಾಲೂಕಿನ ರಂಜೋಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವೀರಾಂಜನೇಯ ದೇವಸ್ಥಾನದ ಉದ್ಘಾಟನೆ ಹಾಗೂ 9 ಗ್ರಾಮ ದೇವತೆಗಳ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಮೊದಲು ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿದೆ. ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ದೇವಸ್ಥಾನಕ್ಕೆ ತೆರಳಿದ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಘರ್ಷಣೆ ಉಂಟಾಗಿದೆ.  

ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಆಮಂತ್ರಣ ಪತ್ರಿಕೆ ಹಾಗೂ ವಿವಿಧ ಮುಖಂಡರಿಗೆ ನೀಡಲಾಗುತ್ತಿರುವ ಆಹ್ವಾನದಲ್ಲಿ ರಾಜಕೀಯ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್ ನೇತೃತ್ವದಲ್ಲಿ ಕೆಲ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ದೇವಸ್ಥಾನಕ್ಕೆ ತೆರಳಿ ಭಜನೆ ಆರಂಭಿಸಿದರು. ಈ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರು, ಇದು ನಮ್ಮ ಗ್ರಾಮದ ಸಮಸ್ಯೆ, ನೀವು ಏಕೆ ಬರುತ್ತೀರಿ? ಎಂದು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು.

ದೇವಸ್ಥಾನವು ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಯ ಸ್ವತ್ತಲ್ಲ. ಅದು ಗ್ರಾಮದ ಎಲ್ಲ ಸಮುದಾಯಗಳ ಭಕ್ತರ ಧಾರ್ಮಿಕ ಭಾವನೆಗೆ ಸಂಬಂಧಿಸಿದ ಸ್ಥಳವಾಗಿದ್ದು, ದೇವತಾ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲ ಸಮುದಾಯಗಳ ಮುಖಂಡರು ಮತ್ತು ದೇಣಿಗೆ ನೀಡಿದವರನ್ನು ಸಮಾನವಾಗಿ ಆಹ್ವಾನಿಸಿ ರಾಜಕೀಯ ಭೇದಭಾವವಿಲ್ಲದೆ ಕಾರ್ಯಕ್ರಮ ನಡೆಸಬೇಕು ಎಂದು ತೆಲ್ಕೂರ್ ಹಾಗೂ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.

ಈ ವೇಳೆ ದೇವಸ್ಥಾನದ ಆವರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ತೀವ್ರಗೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಸ್ಥಳದಲ್ಲಿದ್ದ ಡಿಎಸ್‌ಪಿ ನೇತೃತ್ವದ ಪೊಲೀಸ್ ತಂಡ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದೆ.

“ದೇವಸ್ಥಾನ ನಿರ್ಮಾಣಕ್ಕಾಗಿ ರಾಯಚೂರು, ಯಾದಗಿರಿ ಸೇರಿದಂತೆ ಸೇಡಂ ತಾಲೂಕಿನ ವಿವಿಧೆಡೆ ರಸೀದಿ ನೀಡದೆ ಸುಮಾರು 10 ಕೋಟಿಗೂ ಹೆಚ್ಚಿನ ದೇಣಿಗೆ ಸಂಗ್ರಹಿಸಲಾಗಿದೆ. ಅದರಲ್ಲಿ ಸ್ವಲ್ಪ ಹಣವನ್ನು ಮಾತ್ರ ದೇವಸ್ಥಾನ ನಿರ್ಮಾಣಕ್ಕೆ ಬಳಸಿಕೊಂಡು ಉಳಿದ ಹಣವನ್ನು ಲೂಟಿ ಮಾಡಲಾಗಿದೆ” ಎಂದು ಇದೇ ವೇಳೆ ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್ ಆರೋಪಿಸಿದರು.

“ದೇವಸ್ಥಾನಕ್ಕೆ ನನ್ನ ಕೊಡುಗೆ ಏನು ಎಂದು ಪ್ರಶ್ನಿಸುವವರು, ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಸೇಡಂ ತಾಲೂಕಿನಲ್ಲಿ 20ಕ್ಕೂ ಹೆಚ್ಚು ದೇವಸ್ಥಾನಗಳಿಗೆ 30 ಕೋಟಿಗೂ ಅಧಿಕ ಅನುದಾನ ನೀಡಿರುವುದನ್ನು ಗಮನಿಸಬೇಕು. ಹೀಗಾಗಿ ದೇವಸ್ಥಾನದ ಕುರಿತು ಮಾತನಾಡುವ ನೈತಿಕತೆ ನನಗಿದೆ” ಎಂದು ರಾಜಕುಮಾರ ಪಾಟೀಲ ತೆಲ್ಕೂರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News