×
Ad

Kalaburagi | ಕೈದಿಗಳ ʼರಾಜಾತಿಥ್ಯʼ ವೀಡಿಯೊ ವೈರಲ್ ಪ್ರಕರಣ ಬೆನ್ನಲ್ಲೇ ಜೈಲಿನ ಹೊಸ ಅಧೀಕ್ಷಕರಾಗಿ ರಾಜೇಶ್ ಕಾಂಬಳೆ ನೇಮಕ

Update: 2026-01-05 13:31 IST

ಕಲಬುರಗಿ : ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ʼರಾಜಾತಿಥ್ಯʼ ವೀಡಿಯೊ ವೈರಲ್ ಪ್ರಕರಣದ ಬೆನ್ನಲ್ಲೇ ಇದೀಗ ಅಲ್ಲಿನ ಜೈಲು ಅಧೀಕ್ಷಕರನ್ನಾಗಿ ರಾಜೇಶ್ ಕಾಂಬಳೆ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಲಾಗಿದೆ.

ಒಳಾಡಳಿತ(ಸೆರೆಮನೆ ಮತ್ತು ಸಿನಿಮಾ) ಇಲಾಖೆಯ ಅಧೀನ ಕಾರ್ಯದರ್ಶಿ ಬಿ.ಕೆ.ಭುವನೇಂದ್ರಕುಮಾರ್ ಅವರು ಅಧಿಸೂಚನೆ ಹೊರಡಿಸಿದ್ದು, ರಾಮನಗರ ಕಾರಾಗೃಹದಲ್ಲಿ ಸಹಾಯಕ ಅಧೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದ ರಾಜೇಶ್ ಕಾಂಬಳೆ ಅವರನ್ನು ಮುಂಬಡ್ತಿ ನೀಡಿ, ಕಲಬುರಗಿ ಕೇಂದ್ರ ಕಾರಾಗೃಹದ ಅಧೀಕ್ಷಕರನ್ನಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೂಜಾಟ, ಸಿಗರೇಟ್ ಹಾಗೂ ಮದ್ಯ ಸೇವಿಸುತ್ತಿರುವ ವೀಡಿಯೊ ಎಲ್ಲೆಡೆ ವೈರಲ್ ಆಗಿತ್ತು. ಅದಕ್ಕೂ ಮುನ್ನವೇ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ ಆರ್.ಡಿ ಪಾಟೀಲ್, ಅಧೀಕ್ಷಕಿ ಡಾ.ಅನಿತಾ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ವೀಡಿಯೋ ವೈರಲ್ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಕೈದಿಗಳ ರಾಜಾತಿಥ್ಯ ವೀಡಿಯೊ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾನಿರೀಕ್ಷಕ ಪಿ.ವಿ.ಆನಂದ ರೆಡ್ಡಿ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, ಸಮಗ್ರ ತನಿಖೆಗೆ ಆದೇಶಿಸಲಾಗಿತ್ತು. ಸದ್ಯ ಪ್ರಕರಣ ತನಿಖೆಯ ಹಂತದಲ್ಲಿದೆ. ಇದರ ನಡುವೆಯೇ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ) ಅಲೋಕ್ ಕುಮಾರ್ ಅವರು ಶನಿವಾರ ಕಲಬುರಗಿ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಗುಣಮಟ್ಟದ ಆಹಾರಕ್ಕಾಗಿ ಪತ್ರ, ವೀಡಿಯೊ ವೈರಲ್:

ಜೈಲಿನಲ್ಲಿ ಗುಣಮಟ್ಟದ ಆಹಾರ ನೀಡಬೇಕೆಂದು ಆಗ್ರಹಿಸಿ ಕೈದಿಗಳೇ ಸಾಮೂಹಿಕವಾಗಿ ಪ್ರತಿಭಟನೆ ನಡೆಸಿದ್ದರು. ಈ ಕುರಿತು ಉತ್ತಮ ಆಹಾರಕ್ಕಾಗಿ ನ್ಯಾಯಾಧೀಶರಿಗೂ ಪತ್ರ ಬರೆದಿರುವುದು ಬೆಳಕಿಗೆ ಬಂದಿತ್ತು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News