×
Ad

ಭೀಮಾ ಕೋರೆಗಾಂವ್ ವಿಜಯೋತ್ಸವ | ಸ್ವಾಭಿಮಾನ–ಸಮಾನತೆ ಹೋರಾಟದ ಐತಿಹಾಸಿಕ ಸಂಕೇತ: ಸುಭಾಷ್ ಗುತ್ತೇದಾರ್

Update: 2026-01-05 19:38 IST

ಆಳಂದ: ಭೀಮಾ ಕೋರೆಗಾಂವ್ ಯುದ್ಧವು ಶೋಷಿತ–ವಂಚಿತ ವರ್ಗಗಳ ಸ್ವಾಭಿಮಾನ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹೋರಾಟಕ್ಕೆ ದಿಕ್ಕು ತೋರಿದ ಐತಿಹಾಸಿಕ ಘಟನೆಯಾಗಿದೆ ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಹೇಳಿದರು.

ಪಟ್ಟಣದ ಹಳೆಯ ಚೆಕ್‌ಪೋಸ್ಟ್ ಬಳಿಯ ದೀಕ್ಷಾ ಭೂಮಿಯಲ್ಲಿ ತಾಲೂಕು ದಲಿತ ಸೇನೆಯ ಆಶ್ರಯದಲ್ಲಿ ಸಮವಾರ ನಡೆದ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ಭೀಮಾ ಕೋರೆಗಾಂವ್ ಸ್ತಂಭ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾವಚಿತ್ರ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಈ ವಿಜಯೋತ್ಸವವು ಕೇವಲ ಇತಿಹಾಸ ಸ್ಮರಣೆ ಮಾತ್ರವಲ್ಲ; ಇಂದಿನ ಪೀಳಿಗೆಗೆ ಸಂವಿಧಾನಾತ್ಮಕ ಮೌಲ್ಯಗಳು, ಮಾನವೀಯತೆ ಮತ್ತು ಸಮಾನ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಮಹತ್ವದ ಪ್ರೇರಣೆಯಾಗಿದೆ ಎಂದು ಗುತ್ತೇದಾರ್ ಹೇಳಿದರು.

ದಲಿತ ಸೇನೆ ರಾಜ್ಯಾಧ್ಯಕ್ಷ ಹಾಗೂ ನ್ಯಾಯವಾದಿ ಹನುಮಂತ ಯಳಸಂಗಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭೀಮಾ ಕೋರೆಗಾಂವ್ ಸ್ತಂಭವು ಹೋರಾಟ, ತ್ಯಾಗ ಮತ್ತು ಆತ್ಮಗೌರವದ ಪ್ರತೀಕವಾಗಿದೆ ಎಂದು ಹೇಳಿದರು. ಸಂವಿಧಾನ ನೀಡಿದ ಹಕ್ಕುಗಳನ್ನು ಅರಿತುಕೊಂಡು ಅವುಗಳ ರಕ್ಷಣೆಗೆ ಸದಾ ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಬಳಸಿ ರಾಜಕೀಯ ನಾಟಕ ಮಾಡುತ್ತಿವೆ ಎಂದು ಟೀಕಿಸಿದ ಯಳಸಂಗಿ, ಶಿವಾಜಿ ಮತ್ತು ಸಂಭಾಜಿ ಮಹಾರಾಜರ ಇತಿಹಾಸವನ್ನು ವಿಕೃತಗೊಳಿಸಲಾಗುತ್ತಿದೆ ಹಾಗೂ ಟಿಪ್ಪು ಜಯಂತಿ ವಿಷಯದಲ್ಲಿ ದ್ವಂದ್ವ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ಉಪನ್ಯಾಸಕ ಜೀತೆಂದ್ರ ತಳವಾರ ಉಪನ್ಯಾಸ ನೀಡುತ್ತಾ ಭೀಮಾ ಕೋರೆಗಾಂವ್ ಯುದ್ಧದ ಐತಿಹಾಸಿಕ ಹಿನ್ನೆಲೆ ವಿವರಿಸಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದರಾಮ್ ಪ್ಯಾಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಾದಿಮನಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಮಲ್ಲಿಕಾರ್ಜುನ ಖೇಮಜೀ, ಪ್ರಕಾಶ ಮೂಲಭಾರತಿ, ಆನಂದ ಗಾಯಕವಾಡ, ಪುರಸಭೆ ನಿಕಟಪೂರ್ವ ಸದಸ್ಯ ಶಿವುಪುತ್ರ ನಡಗೇರಿ, ಲಕ್ಷ್ಮಣ ಝಳಕಿ, ಸಿದ್ಧು ಪೂಜಾರಿ, ಕಿಟ್ಟಿ ಸಾಲೇಗಾಂವ, ಶ್ರೀಮಂತ ಜಿಡ್ಡೆ, ಸುನೀಲ ಹಿರೋಳಿಕರ್, ಫಯಾಜ್ ಪಟೇಲ್, ದಲಿತ ಸೇನೆಯ ತಾಲೂಕು ಅಧ್ಯಕ್ಷ ಪಿಂಟು ಸಾಲೇಗಾಂವ, ಗೌರವ ಅಧ್ಯಕ್ಷ ಪಿಂಕು ಭದ್ರೆ, ಗೌತಮ ಕಾಂಬಳೆ, ವಿ.ಓ. ಅಧ್ಯಕ್ಷ ಗೌತಮ ನಿಂಬಾಳ, ಅಪ್ಪು ಗೋಪಾಳೆ, ಆಕಾಶ ಬಂಗರಗಾ, ಸಾಗರೆ ಗುಳಗಿ, ದಿಲೀಪ ಕ್ಷೀರಸಾಗರ, ರಾಘವೇಂದ್ರ ಹೇಬಳಿ, ಸೂರ್ಯಕಾಂಗ ಸಾಲೇಗಾಂವ ಸೇರಿದಂತೆ ಹಲವರಿದ್ದರು. ನಂತರ ಭೀಮಾ ಕೋರೆಗಾಂವ್ ಸ್ತಂಭ ಮೆರವಣಿಗೆ ನಡೆಯಿತು. ಶಿವುಕುಮಾರ ದಳಪತಿ ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News