ಕಲಬುರಗಿಯೇನು ಆಫ್ರಿಕಾ ಖಂಡವೇ?: ಬಹಿರ್ದೆಸೆ ಬಗ್ಗೆ ನ್ಯಾ.ಬಿ.ಎಸ್ ಪಾಟೀಲ್ ಕಳವಳ
ಜಿಲ್ಲೆಯ ವಿವಿಧೆಡೆ ಲೋಕಾಯುಕ್ತರ ಭೇಟಿ, ಪರಿಶೀಲನೆ
ಕಲಬುರಗಿ: "ಈಗಿನಂತಹ ಅಡ್ವಾನ್ಸ್ ಜಗತ್ತಿನಲ್ಲಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಬಹಿರ್ದೆಸೆ ಪದ್ಧತಿ ಇನ್ನೂ ಜೀವಂತವಿದೆ, ಇದೇನು ಆಫ್ರಿಕಾ ಖಂಡವೇ ಎನ್ನುವ ಪ್ರಶ್ನೆ ಕಾಡಿದೆ" ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಅವರು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಯಲು ಶೌಚಮುಕ್ತ ಜಿಲ್ಲೆ, ರಾಜ್ಯ ಎನ್ನುವವರು ಈಗಲೂ ಹಳ್ಳಿಗಳ ಸರ್ಕಲ್ ಗಳಲ್ಲಿ ಹೋಗಿ ಗಮನಿಸಿ, ವೃದ್ಧರು, ಮಕ್ಕಳು ಸೇರಿದಂತೆ ಇತರರು ಬಯಲು ಶೌಚಾಲಯಕ್ಕೆ ಹೋಗುತ್ತಾರೆ. ಇಂತಹ ಅಡ್ವಾನ್ಸ್ ಜಗತ್ತಿನಲ್ಲಿ ನಾವು ಇಷ್ಟು ಹಿಂದೆ ಹೋಗಬೇಕಾ? ಎಂದ ಅವರು ನಾವೇನು ಕಗ್ಗತ್ತಲ ಖಂಡದಲ್ಲಿದ್ದೇವಾ? ಎನ್ನುವ ಪ್ರಶ್ನೆ ಎದುರಾಗುತ್ತದೆ, ಈ ಕುರಿತು ಕೇಸ್ ರಿಜಿಸ್ಟರ್ ಮಾಡಿರುವುದಾಗಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಜಿಲ್ಲೆಗಳ ವ್ಯಾಪ್ತಿಯಲ್ಲಿ 80 ರಿಂದ 85 ಅಧಿಕಾರಿಗಳನ್ನೊಳಗೊಂಡ ಒಟ್ಟು 8 ತಂಡಗಳನ್ನು ರಚಿಸಿ, ಜಿಲ್ಲೆಗಳ ವಿವಿಧ ತಾಲೂಕು ತಹಸೀಲ್ದಾರ್ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ಮಹಾನಗರ ಪಾಲಿಕೆ, ರಿಜಿಸ್ಟರ್ ಕಚೇರಿ ಸೇರಿದಂತೆ ಇತರೆ ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಕೆಲವೆಡೆ ಭ್ರಷ್ಟಾಚಾರ, ಅಧಿಕಾರ ಲೋಪ, ಕೆಲಸ ನಿರ್ವಹಿಸದ ಅಧಿಕಾರಿಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗೆ ಅನೇಕ ಗಂಭೀರ ವಿಷಯಗಳ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ, ಇಂತಹವುಗಳನ್ನೆಲ್ಲ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಆಳಂದ ಚೆಕ್ ಪೋಸ್ಟ್, ಬೀದರ್ ಜಿಲ್ಲೆಯ ಹುಮನಾಬಾದ್ ಚೆಕ್ ಪೋಸ್ಟ್ ಕಡೆಗಳಲ್ಲಿ ಆರ್.ಟಿ.ಒ ಹೆಸರಲ್ಲಿ ಲೂಟಿ ನಡೆಸಲಾಗುತ್ತಿದೆ, ನೇರವಾಗಿ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಒಂದು ಗಂಟೆಯಲ್ಲಿ 8 ಸಾವಿರದಷ್ಟು ಹಣ ಸಂಗ್ರಹವಾಗುತ್ತಿರುವುದು ಗಮನಕ್ಕೆ ಬಂದಿದೆ. ಇದರ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕ್ರಮ ಜರುಗಿಸಲಿದ್ದೇವೆ ಎಂದು ಹೇಳಿದರು.
ಸರ್ಕಾರ, ನಿಝಾಮರು ಕಟ್ಟಿಸಿದ ಮತ್ತು ಅನುಮತಿಸಿದ ಕೆರೆಗಳ ಕುರಿತು ದಾಖಲಾತಿಗಳು ಸಿಗುತ್ತಿಲ್ಲ, ಸ್ವತಂತ್ರಗೊಂಡು 75 ವರ್ಷ ಕಳೆದರೂ ಭೂ ದಾಖಲೆಗಳ ಬಗ್ಗೆ ಮಾಹಿತಿ ಕಲೆ ಹಾಕುವುದರಲ್ಲಿ ವ್ಯವಸ್ಥೆ ಇರುವುದು ಗಮನಿಸಿದರೆ ದುರಂತ ಎನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ, ನಾಯಿಕಾಟಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಧಿಕಾರಿಗಳ ಕರ್ತವ್ಯ ಎಂದ ಅವರು, ದಾಖಲಿಸಿಕೊಂಡ ಎಲ್ಲ ಪ್ರಕರಣಗಳನ್ನು ಶೀಘ್ರದಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.