Kalaburagi | ದೂರುದಾರರಿಂದ ಲಂಚಕ್ಕೆ ಬೇಡಿಕೆ ಆರೋಪ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು
ಸಾಂದರ್ಭಿಕ ಚಿತ್ರ
ಕಲಬುರಗಿ : ಪೋಕ್ಸೋ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ದೂರುದಾರರಿಂದ ಲಂಚದ ಹಣ ಬೇಡಿಕೆ ಇಟ್ಟು ಸ್ವೀಕರಿಸಿದ ಆರೋಪದ ಹಿನ್ನೆಲೆಯಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು ಆದೇಶ ಹೊರಡಿಸಿದ್ದಾರೆ.
ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನೊಂದ ಬಾಲಕಿಯ ಹೇಳಿಕೆ ಪಡೆದುಕೊಳ್ಳುವ ಸಂಬಂಧ ತನಿಖಾ ಸಹಾಯಕ ಸಿಬ್ಬಂದಿಯಾಗಿರುವ ಜ್ಯೋತಿ (ಎಂಎಚ್‌ಸಿ) ಹಾಗೂ ಶಿವಶರಣಪ್ಪ (ಎಎಸ್‌ಐ) ಅವರು ದೂರುದಾರರನ್ನು ಪೊಲೀಸ್ ಠಾಣೆಗೆ ಕರೆಯಿಸಿಕೊಂಡಿದ್ದರು ಎನ್ನಲಾಗಿದೆ.
ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ಹೇಳಿ ದೂರುದಾರರಿಂದ 10,000 ರೂ. ಲಂಚದ ಬೇಡಿಕೆ ಇಟ್ಟಿದ್ದು, ಅದರ ಭಾಗವಾಗಿ 9,000 ರೂ. ಹಣವನ್ನು ಸ್ವೀಕರಿಸುವ ವೇಳೆ ಜೂನ್ 7ರಂದು ಕರ್ನಾಟಕ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಈ ಇಬ್ಬರೂ ಪೊಲೀಸರನ್ನು ಬಲೆಗೆ ಬೀಳಿಸಿದ್ದರು.
ಇನ್ನು ಪೋಕ್ಸೋದಂತಹ ಗಂಭೀರ ಪ್ರಕರಣದಲ್ಲಿ ದೂರುದಾರರಿಗೆ ನೆರವು ನೀಡುವ ಹೆಸರಿನಲ್ಲಿ ಹಣದ ಬೇಡಿಕೆ ಇಟ್ಟಿರುವುದು ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿರುವುದು ಪ್ರಾಥಮಿಕವಾಗಿ ಕಂಡುಬಂದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತಿನ ನಡಾವಳಿ) ನಿಯಮಾವಳಿ-1965/89ರ ನಿಯಮ 5ರ ಅನ್ವಯ ಇಲಾಖಾ ಶಿಸ್ತು ಕ್ರಮ ಬಾಕಿ ಇರಿಸಿ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.