Kalaburagi | ಮಲ್ಲಾಬಾದ್ ಏತ ನೀರಾವರಿ ಕಾಮಗಾರಿಯಲ್ಲಿ ಕಳಪೆ ವಸ್ತು ಬಳಕೆ ಆರೋಪ: ತನಿಖೆಗೆ ರೈತ ಸಂಘ ಆಗ್ರಹ
ಕಲಬುರಗಿ: ಹಲವು ವರ್ಷಗಳ ಹೋರಾಟದ ಬಳಿಕ ಮಂಜೂರಾದ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ, ಕಾಮಗಾರಿಯ ಗುಣಮಟ್ಟದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಾಬಾದ್ ಏತ ನೀರಾವರಿ ಯೋಜನೆ ಹಲವು ವರ್ಷಗಳ ರೈತರ ಹೋರಾಟದ ಬಳಿಕ ಅನುಮೋದನೆಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭವಾಗಿದೆ. ಆದರೆ ಆರಂಭಿಕ ಹಂತದಲ್ಲಿಯೇ ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಅನುಮಾನಗಳು ಮೂಡಿವೆ ಎಂದು ಆರೋಪಿಸಿದರು.
ಜೇವರ್ಗಿ ಬ್ರಾಂಚ್ ಕೆನಾಲ್ ವಿಭಾಗದಲ್ಲಿ 148 ಕೋಟಿ ರೂ. ವೆಚ್ಚದಲ್ಲಿ 144 ಕಿ.ಮೀ. ಹಾಗೂ ಮುದಬಾಳ ಬ್ರಾಂಚ್ ಕೆನಾಲ್ ವಿಭಾಗದಲ್ಲಿ 153 ಕೋಟಿ ರೂ. ವೆಚ್ಚದಲ್ಲಿ 140 ಕಿ.ಮೀ. ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎರಡೂ ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕರ ಹಣ ದುರುಪಯೋಗವಾಗುವುದರ ಜೊತೆಗೆ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಕಾಮಗಾರಿಯಲ್ಲಿ 20 ಎಂಎಂ ಕಂಕರ್ ಜಲ್ಲಿ ಬಳಸಬೇಕಾದಲ್ಲಿ 12 ಎಂಎಂ ಹಾಗೂ 8 ಎಂಎಂ ಜಲ್ಲಿಯನ್ನು ಬಳಸಲಾಗುತ್ತಿದೆ. ಅಲ್ಲದೆ, 43 ಗ್ರೇಡ್ ಸಿಮೆಂಟ್ ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಇಂತಹ ಕಳಪೆ ಕಾಮಗಾರಿಯಿಂದ ರೈತರ ಬಹುದಿನಗಳ ಕನಸಾಗಿರುವ ಯೋಜನೆಯೇ ಮುಂದಿನ ದಿನಗಳಲ್ಲಿ ಸಮಸ್ಯೆಗೆ ಕಾರಣವಾಗುವ ಆತಂಕವಿದೆ ಎಂದರು.
ಕಾಮಗಾರಿಯಲ್ಲಿನ ಲೋಪಗಳ ಕುರಿತು ಹಲವು ಬಾರಿ ಜೇವರ್ಗಿ ಶಾಸಕ ಹಾಗೂ ಸಚಿವ ಅಜಯ್ ಸಿಂಗ್ ಅವರ ಗಮನಕ್ಕೆ ತಂದರೂ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳನ್ನು ಅಮಾನತುಗೊಳಿಸಿ, ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
“ಸರ್ಕಾರ ಕೂಡಲೇ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವರ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು” ಎಂದು ಮಹಾಂತಗೌಡ ನಂದಿಹಳ್ಳಿ ಎಚ್ಚರಿಕೆ ನೀಡಿದರು.
ಕಾಮಗಾರಿಯ ಕಳಪೆ ಗುಣಮಟ್ಟಕ್ಕೆ ನೈತಿಕ ಹೊಣೆ ಹೊತ್ತು ಜೇವರ್ಗಿ ಶಾಸಕ ಹಾಗೂ ಸಚಿವ ಅಜಯ್ ಸಿಂಗ್ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲನಗೌಡ ಪಾಟೀಲ್, ದೇವಮ್ಮ ಯಾಳವಾರ, ಮಂಜುಳಾ ಭಜಂತ್ರಿ, ಸುಶೀಲಾ ಭಜಂತ್ರಿ, ಲಾಳೆ ಸಾಹೇಬ್ ಮನಿಯಾರ್, ಸಿದ್ಧನಗೌಡ ರಾಜವಾಳ, ಮಹಾದೇವಿ, ಜ್ಯೋತಿಬಸು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.