Aland | ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ; ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಿ: ಗುರುಶರಣ ಪಾಟೀಲ

Update: 2026-08-15 22:38 IST

ಆಳಂದ: ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಕಣ್ಣಿನ ಸಮಸ್ಯೆಗಳು ಸೇರಿದಂತೆ ವಿವಿಧ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಗಂಭೀರ ತೊಂದರೆಗಳನ್ನು ತಪ್ಪಿಸಬಹುದು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ ಹೇಳಿದರು.

ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಡಿವೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ, ಕಲಬುರಗಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ಹಾಗೂ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಜನರ ಬಳಿಗೇ ವೈದ್ಯಕೀಯ ಸೇವೆಗಳನ್ನು ತಲುಪಿಸುವ ಇಂತಹ ಉಚಿತ ಆರೋಗ್ಯ ಶಿಬಿರಗಳು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತವೆ. ಬಡ ಹಾಗೂ ಆರ್ಥಿಕವಾಗಿ ಹಿಂದುಳಿದವರು ಶಿಬಿರಗಳ ಸದುಪಯೋಗ ಪಡೆದುಕೊಂಡು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

87 ಮಂದಿಗೆ ಆರೋಗ್ಯ ತಪಾಸಣೆ :

ಶಿಬಿರದಲ್ಲಿ ವಿವಿಧ ವಿಭಾಗಗಳ ತಜ್ಞ ವೈದ್ಯರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಸಲಹೆ ಹಾಗೂ ಚಿಕಿತ್ಸೆಯನ್ನು ನೀಡಿದರು. ಒಟ್ಟು 87 ಮಂದಿ ಶಿಬಿರದಲ್ಲಿ ತಪಾಸಣೆಗೆ ಒಳಗಾದರು. ಇವರಲ್ಲಿ 13 ಮಂದಿಯನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆಯ ಕುರಿತು ವೈದ್ಯರು ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಫಾದರ್ ವಿಲಿಯಂ ಮೀರಾಂದ್, ಗುರಯ್ಯ ಎಂ. ಹಿರೇಮಠ್, ಶ್ರೀಕಾಂತ್ ಎಚ್. ವಾರದ್, ಶರಣಬಸಪ್ಪ ಅಂಬಳಿ, ಗ್ರಾಮ ಪಂಚಾಯಿತಿ ಸಹಾಯಕಾಧಿಕಾರಿ ಹನುಮಂತರಾಯ ಕೆ. ಮಧುಗುಣಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವೈದ್ಯರಾದ ಡಾ. ಕಿರಣ್ ಜಾರ್ಜ್, ಡಾ. ಡೆಂಜಿಲ್, ಡಾ. ಅಂಬಿಕಾ, ನೇತ್ರ ತಜ್ಞೆ ಡಾ. ದೀಪಾ, ಕುಮಾರ್ ಹಾಗೂ ಕೊರಳ್ಳಿ ಗ್ರಾಮ ಪಂಚಾಯಿತಿಯ ಪದಾಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News