Kalaburagi | ದೃಶ್ಯಕಲಾ ಕ್ಷೇತ್ರದಲ್ಲೂ ವಸ್ತುನಿಷ್ಠ ವಿಮರ್ಶೆ ಅಗತ್ಯ: ಡಾ.ಅಶೋಕ ಶೆಟಕಾರ
ಕಲಬುರಗಿ: ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ವಸ್ತುನಿಷ್ಠ ವಿಮರ್ಶೆ ನಡೆಯುವಂತೆ ದೃಶ್ಯಕಲಾ ಕ್ಷೇತ್ರದಲ್ಲೂ ಕಲಾಕೃತಿಗಳ ವಿಮರ್ಶೆ ನಡೆಯುವುದು ಅಗತ್ಯ ಎಂದು ಹಿರಿಯ ಚಿತ್ರಕಲಾವಿದ ಡಾ. ಅಶೋಕ ಶೆಟಕಾರ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ವಿಜಯನಗರ ಕಾಲೋನಿಯ ಅನುಚಂದ್ರ ಆರ್ಟ್ ಸ್ಟುಡಿಯೋದಲ್ಲಿ ಆಯೋಜಿಸಿದ್ದ ಯಾದಗಿರಿಯ ಯುವ ಚಿತ್ರಕಲಾವಿದ ಅಮೀನರೆಡ್ಡಿ ಅವರ ‘ಬ್ಲಾಕ್ ಪ್ಲಾವರ-4’ ಶೀರ್ಷಿಕೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತಿಗಳು ರಚಿಸಿದ ಕೃತಿಗಳ ಬಿಡುಗಡೆ ಸಂದರ್ಭದಲ್ಲಿ ವಿಮರ್ಶಾತ್ಮಕವಾಗಿ ಪರಿಚಯಿಸುವಂತೆ, ಚಿತ್ರಕಲಾ ಪ್ರದರ್ಶನಗಳಲ್ಲಿಯೂ ಪ್ರದರ್ಶಿತ ಕಲಾಕೃತಿಗಳ ಕುರಿತು ಪ್ರಾಮಾಣಿಕ ಚರ್ಚೆ ಹಾಗೂ ವಿಮರ್ಶೆ ನಡೆಯಬೇಕು. ಇದರಿಂದ ಕಲಾವಿದರು ತಮ್ಮ ಕಲಾಕೃತಿಗಳಲ್ಲಿನ ನ್ಯೂನತೆಗಳನ್ನು ಅರಿತು ಸರಿಪಡಿಸಿಕೊಂಡು ಉತ್ತಮ ಕೃತಿಗಳನ್ನು ರಚಿಸಲು ಸಾಧ್ಯವಾಗುತ್ತದೆ ಎಂದರು.
ಕಲ್ಯಾಣ ಕರ್ನಾಟಕದ ಚಿತ್ರಕಲಾವಿದರು ಮುಂಬೈ, ದೆಹಲಿ ಸೇರಿದಂತೆ ಮಹಾನಗರಗಳಲ್ಲಿ ಪ್ರದರ್ಶನ ಆಯೋಜಿಸುವ ಮುನ್ನ ಸ್ಥಳೀಯವಾಗಿ ಪ್ರದರ್ಶನ ಪೂರ್ವ ವೀಕ್ಷಣೆ ಏರ್ಪಡಿಸಿ ಹಿರಿಯ ಕಲಾವಿದರು ಹಾಗೂ ವಿಮರ್ಶಕರ ಅಭಿಪ್ರಾಯ ಪಡೆಯಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಡಾ. ಬಸವರಾಜ ಕಲೆಗಾರ ಮಾತನಾಡಿ, ಅಮೀನರೆಡ್ಡಿ ಅವರು ಜೀವಪರ ಕಾಳಜಿ ಹಾಗೂ ಪರಿಸರ ಪ್ರೀತಿಯುಳ್ಳ ಕಲಾವಿದ. ಆಧುನಿಕತೆಯ ಭರಾಟೆಯಲ್ಲಿ ಮಾನವ ಪ್ರಕೃತಿಯನ್ನು ನಾಶ ಮಾಡಿ ಕಾಂಕ್ರೀಟ್ ಕಾಡುಗಳಲ್ಲಿ ಬದುಕುತ್ತಿರುವ ವಾಸ್ತವವನ್ನು ಅವರ ವರ್ಣಚಿತ್ರಗಳಲ್ಲಿ ಕಾಣಬಹುದು ಎಂದರು.
ದಿ ಆರ್ಟ್ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಚ್. ಬೆಳಮಗಿ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು. ಅನುಚಂದ್ರ ಆರ್ಟ್ ಸ್ಟುಡಿಯೋ ಮುಖ್ಯಸ್ಥ ಚಂದ್ರಹಾಸ ಜಾಲಿಹಾಳ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಅಮೀನರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಿರಿಯ ಶಿಲ್ಪಕಲಾವಿದ ಚಂದ್ರಶೇಖರ ವ್ಹಾಯ್. ಶಿಲ್ಪಿ ಅವರಿಗೆ ನುಡಿನಮನ ಸಲ್ಲಿಸಲಾಯಿತು. ನಟರಾಜ ಶಿಲ್ಪಿ, ಡಾ. ಪರಶುರಾಮ ಪಿ., ಸೂರ್ಯಕಾಂತ ನಂದೂರ ಹಾಗೂ ಡಾ. ಮಲ್ಲಿಕಾರ್ಜುನ ಬಾಗೋಡಿ ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಹೇಶ ತಳವಾರ, ಗೌರಿಶಂಕರ ಅಂದಾನಿ, ದೌಲತರಾಯ ದೇಸಾಯಿ, ಪ್ರಶಾಂತ ಕುಮಾರ ಜಿ., ಪ್ರದೀಪಸಿಂಗ್, ಸಂಗಮೇಶ ಚಿಲಶೆಟ್ಟಿ, ಶಿವಶರಣ ಡಿ., ನೀಲಾಂಬಿಕಾ ಚೌಕಿಮಠ, ಕವಿತಾ ಕಟ್ಟೆ, ಅಖಿಲೇಶ ದೊಡ್ಡಮನಿ, ತಿಪ್ಪಣ್ಣ ಜಾಧವ, ಶಿವಕುಮಾರ ಜಾಧವ ಸೇರಿದಂತೆ ಚಿತ್ರಕಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಲಾವಿದ ಮಲ್ಲಿಕಾರ್ಜುನ ಕೊರಳ್ಳಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಯಾದಗಿರಿಯಲ್ಲಿ ಚಿತ್ರಕಲಾ ಗ್ಯಾಲರಿ ನಿರ್ಮಾಣಕ್ಕೆ ಆಗ್ರಹ :
ಕಲಬುರಗಿ ನಗರದಲ್ಲಿ 10ಕ್ಕೂ ಹೆಚ್ಚು ಚಿತ್ರಕಲಾ ಗ್ಯಾಲರಿಗಳಿವೆ. ಆದರೆ ಯಾದಗಿರಿಯಲ್ಲಿ ಚಿತ್ರಕಲಾವಿದರು ಕಲಾ ಪ್ರದರ್ಶನ ಆಯೋಜಿಸಲು ಸೂಕ್ತ ಗ್ಯಾಲರಿಗಳಿಲ್ಲ. ಹೀಗಾಗಿ ಯಾದಗಿರಿ ಜಿಲ್ಲೆಯ ಕಲಾವಿದರು ಪ್ರದರ್ಶನಕ್ಕಾಗಿ ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಕರ್ನಾಟಕ ಸರ್ಕಾರ ಹಾಗೂ ಯಾದಗಿರಿ ಜಿಲ್ಲಾಡಳಿತ ಜಂಟಿಯಾಗಿ ಯಾದಗಿರಿ ನಗರದಲ್ಲಿ ಸುಸಜ್ಜಿತ ಚಿತ್ರಕಲಾ ಗ್ಯಾಲರಿ ನಿರ್ಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಡಾ. ಬಸವರಾಜ ಕಲೆಗಾರ ಆಗ್ರಹಿಸಿದರು.