Kalaburagi | ಖರ್ಗೆ ಭಾಷಣದ ವೇದಿಕೆ ಶುದ್ಧೀಕರಣ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಕಲಬುರಗಿ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದ್ವಾನಿಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ವೇದಿಕೆಯನ್ನು ‘ಶುದ್ಧೀಕರಣ’ ಮಾಡಿರುವ ಘಟನೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.
ನಗರದ ಸೇಡಂ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಅನ್ನಪೂರ್ಣ ಕ್ರಾಸ್‌ವರೆಗೆ ಸಾಗಿತು. ಈ ವೇಳೆ ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಕೋಮುವಾದಿ ಮನಸ್ಥಿತಿಗಳ ವಿರುದ್ಧ ಕಾರ್ಯಕರ್ತರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರು ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
‘ಸ್ವಾತಂತ್ರ್ಯ ಸಿಕ್ಕು 80 ವರ್ಷವಾದರೂ ಜಾತೀಯತೆ ಹೋಗಲಿಲ್ಲವೇ?’, ‘ಸಂವಿಧಾನವೇ ನಮ್ಮ ಧರ್ಮ, ಸಮಾನತೆಯೇ ಅದರ ಗುರಿ’, ‘ಜಾತಿಯಿಂದ ಶುದ್ಧಿಯಲ್ಲ, ಮನಸ್ಸಿನಿಂದ ಶುದ್ಧಿ ಬೇಕು’, ‘ಮಣ್ಣು ಶುದ್ಧ ಮಾಡುವೀರಾ? ಮನಸ್ಸು ಶುದ್ಧಿ ಮೊದಲು ಮಾಡಿ’, ‘ಏಕತೆಗೆ ಜೈ, ದ್ವೇಷಕ್ಕೆ ಧಿಕ್ಕಾರ’, ‘ಜೈಭೀಮ್, ಜೈ ಸಂವಿಧಾನ’ ಸೇರಿದಂತೆ ವಿವಿಧ ಘೋಷಣೆಗಳನ್ನು ಒಳಗೊಂಡ ಭಿತ್ತಿಫಲಕಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿರುವುದು ಅತ್ಯಂತ ಖಂಡನೀಯ. ಇಂತಹ ಕೃತ್ಯಗಳು ಜಾತೀಯತೆ ಹಾಗೂ ಅಸ್ಪೃಶ್ಯತೆಯ ಮನೋಭಾವ ಇನ್ನೂ ಜೀವಂತವಾಗಿರುವುದನ್ನು ತೋರಿಸುತ್ತವೆ ಎಂದರು.
“ಈ ಕೃತ್ಯ ಎಸಗಿದವರ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ಬಹಿರಂಗವಾಗಬೇಕು. ಘಟನೆ ನಡೆದು ಹಲವು ದಿನಗಳಾದರೂ ಕಿಡಿಗೇಡಿಗಳನ್ನು ವಶಕ್ಕೆ ಪಡೆಯದಿರುವುದು ಅಕ್ಷಮ್ಯ. ಸರ್ಕಾರ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು” ಎಂದು ಆಗ್ರಹಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಸಂವಿಧಾನ ಪ್ರತಿಪಾದಿಸುವ ಸಮಾನತೆ, ಸಹೋದರತ್ವ ಹಾಗೂ ಸಾಮಾಜಿಕ ನ್ಯಾಯದ ಆಶಯಗಳಿಗೆ ವಿರುದ್ಧವಾದ ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಶಾಸಕ ಕನೀಜ್ ಫಾತಿಮಾ, ಸುಭಾಷ ರಾಠೋಡ, ಕುಡಾ ಅಧ್ಯಕ್ಷ ಮಜಹರ್ ಆಲಂಖಾನ್, ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್, ಮಾಜಿ ಸಚಿವ ರೇವೂನಾಯಕ ಬೆಳಮಗಿ, ಪಂಚ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ರೇಣುಕಾ ಸಿಂಗೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಕೀಲ್ ಅಹ್ಮದ್ ಸರಡಗಿ, ಮುಖಂಡರಾದ ಡಾ. ಕಿರಣ ದೇಶಮುಖ, ವಹಾಜ್ ಬಾಬಾ, ಲಚ್ಚಪ್ಪ ಜಮಾದಾರ್, ಭೀಮರಾವ ಟಿ.ಟಿ., ಈರಣ್ಣ ಝಳಕಿ, ಶಿವು ಹೊನಗುಂಟಿ, ಶಿವಾನಂದ ಮರ್ತೂರು, ಶ್ವೇತಾ ಗಾಜರೆ, ಲತಾ ರಾಠೋಡ, ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.