Kalaburagi | ಮಹಿಳಾ ಸಾಹಿತಿಗಳಿಗೆ ವೇದಿಕೆ, ಅಕಾಡೆಮಿಗಳಲ್ಲಿ ಸ್ಥಾನಮಾನ ಅಗತ್ಯ: ಶಕುಂತಲಾ ಪಾಟೀಲ ಜಾವಳಿ
ಕಲಬುರಗಿ: ಯಾವುದೇ ಸಮಾಜದ ಪ್ರಗತಿಗೆ ಸ್ತ್ರೀವಾದಿ ಸಾಹಿತ್ಯ ಪೂರಕವಾಗಿದ್ದು, ಮಹಿಳಾ ಸಾಹಿತಿಗಳಿಗೆ ಸೂಕ್ತ ವೇದಿಕೆ ಹಾಗೂ ಅಕಾಡೆಮಿಗಳಲ್ಲಿ ಸ್ಥಾನಮಾನ ದೊರೆಯಬೇಕು ಎಂದು ಕಲಬುರಗಿ ಜಿಲ್ಲಾ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷೆ, ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕಸಾಪ, ಅಖಿಲ ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲಬುರಗಿ ಜಿಲ್ಲೆಯಲ್ಲಿ ಮಹಿಳಾ ಬರಹಗಾರರ ಕೊರತೆಯಿಲ್ಲ. ಅವರ ಸಂವೇದನಾಶೀಲತೆ ಮತ್ತು ಅಧ್ಯಯನದಿಂದ ಕನ್ನಡ ಸಾಹಿತ್ಯ ಪರಂಪರೆ ಮತ್ತಷ್ಟು ಶ್ರೀಮಂತಗೊಳ್ಳುತ್ತಿದೆ. ಆದರೆ ಮಹಿಳಾ ಸಾಹಿತಿಗಳಿಗೆ ಸೂಕ್ತ ಅವಕಾಶ ಹಾಗೂ ವೇದಿಕೆ ದೊರೆಯುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳಾ ವಚನಕಾರ್ತಿಯರ ಸ್ಮಾರಕಗಳು ಹಾಗೂ ದೇಗುಲಗಳ ಸಂರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಸಾಹಿತ್ಯ ಅಧ್ಯಯನ ಪೀಠಗಳನ್ನು ಆರಂಭಿಸಬೇಕು. ಜನಪದ ಸಾಹಿತ್ಯ ಕ್ಷೇತ್ರದ ಮಹಿಳಾ ಕಲಾವಿದರು ಹಾಗೂ ಸಂಗೀತಗಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕದ 371(ಜೆ) ಮೀಸಲಾತಿಯಡಿ ಮಹಿಳೆಯರಿಗೆ ವಿಶೇಷ ನೇಮಕಾತಿ ಕಲ್ಪಿಸಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳಿಗೆ ಹಿರಿಯ ಮಹಿಳಾ ಸಾಹಿತಿಯರ ಹೆಸರಿಡುವ ಮೂಲಕ ಅವರ ಸಾಹಿತ್ಯ ಸೇವೆಯನ್ನು ಸ್ಮರಿಸಬೇಕು ಎಂದು ಶಕುಂತಲಾ ಪಾಟೀಲ ಜಾವಳಿ ಮನವಿ ಮಾಡಿದರು.
ಮಹಿಳಾ ಸಾಧಕಿಯರಿಗೆ ‘ವಾತ್ಸಲ್ಯ ಕಾವ್ಯ ಗೌರವ’ :
ಮಹಿಳಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತೆ ಶೀಲಾ ಪಿ. ತಿವಾರಿ, ಡಾ. ಗಂಗಾ ಪೂಜಾರ, ಡಾ. ನಿರ್ಮಲಾ ಸಿ. ಕೆಳಮನಿ, ಪದ್ಮಿನಿ ಕಿರಣಗಿ, ಡಾ. ಶರಣಮ್ಮ ಬಿ. ಪಾಟೀಲ, ರಾಜೇಶ್ವರಿ ಸಾಹು, ಭವಾನಿ ಕಾಡ್ಲೂರ, ಮಾಲಾ ಕಮಲಾಪೂರ ಹಾಗೂ ಶಿಲ್ಪಾ ದಾಸ ಅವರನ್ನು ‘ವಾತ್ಸಲ್ಯ ಕಾವ್ಯ ಗೌರವ’ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
‘ಮರಳಿ ಅರಳುವ ಪರಿ’ ಗೋಷ್ಠಿಯಲ್ಲಿ ಮಹಿಳೆ ಮತ್ತು ಮೂಢನಂಬಿಕೆ ಕುರಿತು ಡಾ. ಶಿವಲೀಲಾ ಚಟ್ನಳ್ಳಿ ಹಾಗೂ ಸಮಾಜದ ಕಣ್ಣು ತೆರೆಸುವಲ್ಲಿ ಸ್ತ್ರೀವಾದಿ ಸಾಹಿತ್ಯದ ಪಾತ್ರ ಕುರಿತು ಡಾ. ಕಾವ್ಯಶ್ರೀ ಮಹಾಗಾಂವಕರ್ ಮಾತನಾಡಿದರು.
ಸಮ್ಮೇಳನದಲ್ಲಿ ‘ಶಕ್ತಿ ಸಿಂಚನ’ ಕೃತಿ ಬಿಡುಗಡೆ, ಶಕ್ತಿ ಕವಿಗೋಷ್ಠಿ ಹಾಗೂ ವಿವಿಧ ಕವಯಿತ್ರಿಯರಿಂದ ಕವನ ವಾಚನ ನಡೆಯಿತು. ನೀತಾ ಡಿ. ಕಾಬಾ, ಮಂಜುಳಾ ಪಾಟೀಲ, ಪ್ರತಿಭಾ ಮಹಿಂದ್ರಕರ್, ಸಾವಿತ್ರಿ ಜನವಾಡಕರ್, ಕವಿತಾ ಕಾವಳೆ, ಘಾಳಮ್ಮ ಸಿಂಧೆ, ಮಹಾನಂದಾ ಹುಲಿ ಸೇರಿದಂತೆ ಹಲವು ಕವಯಿತ್ರಿಯರು ಭಾಗವಹಿಸಿದ್ದರು.
ಹಿರಿಯ ಸಾಹಿತಿ ಪ್ರಮೀಳಾ ಜಾನಪ್ಪಗೌಡ ಸಮಾರೋಪ ನುಡಿಗಳನ್ನಾಡಿದರು. ಪ್ರಿಯಾಂಕಾ ಪಾಟೀಲ, ರೂಪಾ ಪೂಜಾರಿ ಹಾಗೂ ಭಾಗ್ಯಶ್ರೀ ಮರಗೋಳ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಜಗದೀಶ್ವರಿ ನಾಸಿ, ರೇಣುಕಾ ಡಾಂಗೆ, ನಂದಿನಿ ಸನಬಾಳ, ಶಿವಲೀಲಾ ಕಲಗುರ್ಕಿ, ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಕುಪೇಂದ್ರ ಬರಗಾಲಿ, ವಿಶಾಲಾಕ್ಷಿ ಮಾಯಣ್ಣವರ್, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ಗಣೇಶ ಚಿನ್ನಾಕಾರ, ಎಸ್.ಕೆ. ಬಿರಾದಾರ, ಸುರೇಶ ಲೇಂಗಟಿ, ಸುರೇಶ ದೇಶಪಾಂಡೆ, ಭುವನೇಶ್ವರಿ ಹಳ್ಳಿಖೇಡ, ಶಾರದಾ ಆವಟೆ, ಮಾಯಾದೇವಿ ತುರಂ, ಜಗದೀಶ ಮರಪಳ್ಳಿ, ವಿದ್ಯಾಸಾಗರ ದೇಶಮುಖ, ಕಲ್ಯಾಣಕುಮಾರ ಶೀಲವಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.