ಕಲಬುರಗಿ: ವಾರಾಂತ್ಯ ರಜೆ ಹಾಗೂ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಸೆಪ್ಟೆಂಬರ್ 10ರಿಂದ 20ರವರೆಗೆ ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಿದೆ.

ಸೆಪ್ಟೆಂಬರ್ 12 ಮತ್ತು 13ರ ವಾರಾಂತ್ಯ ರಜೆ ಹಾಗೂ ಸೆಪ್ಟೆಂಬರ್ 14ರ ಗೌರಿ-ಗಣೇಶ ಹಬ್ಬದ ಸರ್ಕಾರಿ ರಜೆಯನ್ನು ಗಮನದಲ್ಲಿಟ್ಟುಕೊಂಡು, ಸೆಪ್ಟೆಂಬರ್ 10ರಿಂದ 13ರವರೆಗೆ ಕೆಕೆಆರ್‌ಟಿಸಿ ವ್ಯಾಪ್ತಿಯ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಮತ್ತು ಇತರ ಪ್ರಮುಖ ನಗರಗಳಿಗೆ ವಿಶೇಷ ಬಸ್‌ಗಳನ್ನು ಓಡಿಸಲಾಗುತ್ತದೆ.

ಇದಲ್ಲದೆ, ಸೆಪ್ಟೆಂಬರ್ 11, 12 ಮತ್ತು 13ರಂದು ಬೆಂಗಳೂರಿನಿಂದ ಕೆಕೆಆರ್‌ಟಿಸಿ ವ್ಯಾಪ್ತಿಯ ವಿವಿಧ ಜಿಲ್ಲೆಗಳಿಗೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ದೈನಂದಿನ 200 ಬಸ್‌ಗಳ ಜೊತೆಗೆ 300 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

ಹಬ್ಬದ ಬಳಿಕ ಸೆಪ್ಟೆಂಬರ್ 15ರಿಂದ 20ರವರೆಗೆ ಬೆಂಗಳೂರು ಮತ್ತು ಇತರ ನಗರಗಳಿಂದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತದೆ ಎಂದು ನಿಗಮ ತಿಳಿಸಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಕರ್ನಾಟಕ ಹಾಗೂ ಅಂತರರಾಜ್ಯದ 22 ಗಣಕೀಕೃತ ಬುಕ್ಕಿಂಗ್ ಕೌಂಟರ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು. ಮುಂಗಡ ಟಿಕೆಟ್‌ನಲ್ಲಿ ನಮೂದಿಸಿರುವ ಬಸ್ ನಿಲ್ದಾಣ ಅಥವಾ ಪಿಕ್‌ಅಪ್ ಪಾಯಿಂಟ್‌ ಅನ್ನು ಪರಿಶೀಲಿಸಿಕೊಂಡು ಪ್ರಯಾಣಿಸಲು ನಿಗಮ ಮನವಿ ಮಾಡಿದೆ.

ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಟಿಕೆಟ್ ಕಾಯ್ದಿರಿಸಿದರೆ ಶೇ.5 ರಷ್ಟು ರಿಯಾಯಿತಿ, ಹೋಗುವ ಮತ್ತು ಬರುವ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದರೆ ಹಿಂದಿರುಗುವ ಪ್ರಯಾಣದ ದರದಲ್ಲಿ ಶೇ.10 ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor