ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ದೊರೆತಿರುವ ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನವನ್ನು ಉಳಿಸಿಕೊಳ್ಳಲು ನಿರಂತರ ಜಾಗೃತಿ ಮತ್ತು ಹೋರಾಟ ಅಗತ್ಯವಾಗಿದೆ. ಹಕ್ಕುಗಳನ್ನು ಉಳಿಸಿಕೊಳ್ಳದಿದ್ದರೆ ಅವುಗಳನ್ನು ಕಸಿದುಕೊಳ್ಳಲು ಮುಂದಾಗುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೋರಾಟಗಾರ ಹಾಗೂ ಚಿಂತಕ ಡಾ. ರಝಾಕ್ ಉಸ್ತಾದ್ ಹೇಳಿದರು.

ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ), ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೋರಾಟ ಸಮಿತಿ ಹಾಗೂ ಪ್ರಜ್ಞಾ ಕಾನೂನು ಸಲಹಾ ಸಮಿತಿ ಆಶ್ರಯದಲ್ಲಿ ಮಂಗಳವಾರ ನಡೆದ ‘ಕಲಂ 371(ಜೆ) ದಶಮಾನದ ಅವಲೋಕನ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

371(ಜೆ) ವ್ಯಾಪ್ತಿಗೆ ವಿಜಯಪುರ, ಗದಗ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನು ಸೇರಿಸಬೇಕೆಂಬ ಬೇಡಿಕೆಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಈಗಿರುವ ವಿಶೇಷ ಸ್ಥಾನಮಾನದ ಸಮರ್ಪಕ ಅನುಷ್ಠಾನಕ್ಕೆ ಈ ಭಾಗದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

371(ಜೆ)ಯ ಇತಿಹಾಸ, ಮುಲ್ಕಿ ಕಾನೂನು ಹಾಗೂ ಹೈದರಾಬಾದ್ ಕರ್ನಾಟಕದ ಹೋರಾಟದ ಹಿನ್ನೆಲೆಯನ್ನು ಶಿಕ್ಷಣ ಪಠ್ಯಕ್ರಮದಲ್ಲಿ ಸೇರಿಸಬೇಕು. ಉದ್ಯೋಗ ಮತ್ತು ಶಿಕ್ಷಣದಲ್ಲಿ ಸ್ಥಳೀಯರಿಗೆ ದೊರೆತಿರುವ ಮೀಸಲಾತಿಯ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಳೆದ ಒಂದೂವರೆ ದಶಕದಲ್ಲಿ ಕಲ್ಯಾಣ ಕರ್ನಾಟಕದಲ್ಲಿ 1,16,816 ಹುದ್ದೆಗಳು ಮಂಜೂರಾಗಿದ್ದು, 79,370 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಸಾವಿರಾರು ಹುದ್ದೆಗಳು ಇನ್ನೂ ಖಾಲಿ ಉಳಿದಿದ್ದು, ಮೀಸಲಾತಿಯಡಿ ಭರ್ತಿಯಾಗಬೇಕಿದ್ದ ಹುದ್ದೆಗಳೂ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2014ರಿಂದ ಈವರೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಸರ್ಕಾರ ಸುಮಾರು 29,480 ಕೋಟಿ ರೂ. ಅನುದಾನ ನೀಡಿದ್ದರೂ, ಅದರಲ್ಲೂ ಸುಮಾರು 16 ಸಾವಿರ ರೂ. ಕೋಟಿ ಮಾತ್ರ ವೆಚ್ಚವಾಗಿದೆ. ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಕೆಯಾಗದಿರುವುದರಿಂದ ಪ್ರದೇಶದ ಅಭಿವೃದ್ಧಿಯಲ್ಲಿ ನಿರೀಕ್ಷಿತ ಬದಲಾವಣೆ ಕಂಡುಬಂದಿಲ್ಲ ಎಂದು ಹೇಳಿದರು.

ಅಭಿವೃದ್ಧಿ ಎಂದರೆ ಅನುದಾನ ಮಾತ್ರವಲ್ಲ: 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೋರಾಟಗಾರ್ತಿ ಕೆ. ನೀಲಾ, ಅಭಿವೃದ್ಧಿ ಎಂದರೆ ರಸ್ತೆ, ಕಟ್ಟಡ ಹಾಗೂ ಅನುದಾನ ಮಾತ್ರವಲ್ಲ; ಶಿಕ್ಷಣ, ಆರೋಗ್ಯ, ಪೌಷ್ಟಿಕತೆ ಮತ್ತು ಸ್ವಾಭಿಮಾನದ ಬದುಕು ದೊರೆಯುವುದೇ ನಿಜವಾದ ಅಭಿವೃದ್ಧಿ ಎಂದು ಹೇಳಿದರು.

ಕಲ್ಯಾಣ ಕರ್ನಾಟಕದ ಸಾವಿರಾರು ಶಾಲೆಗಳು ಶಿಥಿಲಾವಸ್ಥೆಯಲ್ಲಿದ್ದು, ಹೆಣ್ಣು ಮಕ್ಕಳಿಗೆ ಶೌಚಾಲಯಗಳ ಕೊರತೆ, ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಮೂಲಸೌಕರ್ಯಗಳ ಅಭಾವ ಇನ್ನೂ ಮುಂದುವರಿದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ, 371(ಜೆ) ವಿಶೇಷ ಸ್ಥಾನಮಾನಕ್ಕಾಗಿ ನಡೆದ ಹೋರಾಟದ ಇತಿಹಾಸವನ್ನು ಸ್ಮರಿಸಿ, ಕಲಬುರಗಿಯನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಘೋಷಿಸಬೇಕು ಹಾಗೂ ಕಲ್ಯಾಣ ಕರ್ನಾಟಕದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಮಹಾವಿದ್ಯಾಲಯದ (ಸ್ವಾಯತ್ತ) ಪ್ರಾಂಶುಪಾಲರಾದ ಇಂದುಮತಿ ಪಾಟೀಲ ವಹಿಸಿದ್ದರು. ಸಾಮಾಜಿಕ ಚಿಂತಕಿ ಮೀನಾಕ್ಷಿ ಬಾಳಿ, ಶಿವಶರಣಪ್ಪ ಮೂಳೆಗಾಂವ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಶ್ರೀಮಂತ ಹೋಳ್ಕರ್, ಪ್ರಾಧ್ಯಾಪಕಿ ರಬಿಯಾ, ನಾಗಪ್ಪ ಗೋಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor