Kalaburagi | ಡಾ.ಸೂರ್ಯಕಾಂತ ಎಸ್.ಸುಜ್ಯಾತ್ ಅವರಿಗೆ ‘ಅನುವಾದ ಸಾಹಿತ್ಯ ಕ್ಷೇತ್ರದ ಗೌರವ ಪುರಸ್ಕಾರ’
ಕಲಬುರಗಿ: ಪ್ರತಿಷ್ಠಿತ ನೂತನ ಪದವಿ ಮಹಾವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರು ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕರಾಗಿರುವ ಡಾ. ಸೂರ್ಯಕಾಂತ ಎಸ್. ಸುಜ್ಯಾತ್ ಅವರಿಗೆ ಕರ್ನಾಟಕ ಸರ್ಕಾರದ ಕುವೆಂಪು ಭಾಷಾಭಾರತಿ ಪ್ರಾಧಿಕಾರದ 2025ನೇ ಸಾಲಿನ ‘ಅನುವಾದ ಸಾಹಿತ್ಯ ಕ್ಷೇತ್ರದ ಗೌರವ ಪುರಸ್ಕಾರ’ ಲಭಿಸಿದೆ.
ಅನುವಾದ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಈ ಪ್ರತಿಷ್ಠಿತ ಗೌರವವನ್ನು ಘೋಷಿಸಿದೆ.
ಡಾ. ಸುಜ್ಯಾತ್ ಅವರು ಹಿಂದಿ ಮತ್ತು ಮರಾಠಿ ಭಾಷೆಗಳ ಹಲವು ಪ್ರಮುಖ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ವಿವಿಧ ಭಾಷೆಗಳು ಮತ್ತು ಸಂಸ್ಕೃತಿಗಳ ನಡುವಿನ ಸಾಹಿತ್ಯಿಕ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಅನುವಾದಗಳು ಕನ್ನಡ ಓದುಗರಿಗೆ ಹೊಸ ಸಾಹಿತ್ಯ ಲೋಕವನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.
ಅವರ ಸಾಹಿತ್ಯ ಸೇವೆ ಹಾಗೂ ಅನುವಾದ ಕ್ಷೇತ್ರದಲ್ಲಿನ ಅಪಾರ ಕೊಡುಗೆಯನ್ನು ಗುರುತಿಸಿ ರಾಜ್ಯ ಸರ್ಕಾರದ ಗೌರವ ಪುರಸ್ಕಾರ ಲಭಿಸಿರುವುದಕ್ಕೆ ಸಾಹಿತ್ಯಾಸಕ್ತರು, ಲೇಖಕರು ಹಾಗೂ ಶಿಕ್ಷಣ ಕ್ಷೇತ್ರದ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಡಾ. ಸೂರ್ಯಕಾಂತ ಎಸ್. ಸುಜ್ಯಾತ್ ಅವರಿಗೆ ಗೌರವ ಪುರಸ್ಕಾರ ದೊರೆತಿರುವ ಹಿನ್ನೆಲೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು, ಕಲಾನಿಕಾಯದ ಡೀನರು ಹಾಗೂ ನಾಡಿನ ಹಿರಿಯ ಸಾಹಿತಿಗಳಾದ ಪ್ರೊ. ಎಚ್.ಟಿ. ಪೋತೆ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಹಣಮಂತ ಜಂಗೆ, ಡಾ. ಶ್ರೀಶೈಲ ನಾಗರಾಳ, ಡಾ. ಸಂಗಪ್ಪ ಹೊಸ್ಮನಿ, ಡಾ. ಎಂ.ಬಿ. ಕಟ್ಟಿ, ಡಾ. ಸಂತೋಷ ಕಂಬಾರ, ಡಾ. ಹಣಮಂತ ಮೆಲ್ಕೇರಿ, ಡಾ. ಸುನೀಲ ಜಾಬಾದಿ, ಡಾ. ಶುಲಾಬಾಯಿ, ಡಾ. ಶೀಲಾದೇವಿ ಬಿರಾದರ, ಡಾ. ಶಿವಗಂಗಾ ಬಿಲಗುಂದಿ ಹಾಗೂ ಡಾ. ಪಿ. ನಂದಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.