ಸಾಂದರ್ಭಿಕ ಚಿತ್ರ | Photo credit : magnific

ಕಲಬುರಗಿ : ಕಲಬುರಗಿ ನಗರದ ಸುತ್ತಮುತ್ತಲಿನ ರಿಂಗ್ ರಸ್ತೆಯ ಸರ್ವಿಸ್ ರಸ್ತೆ ಕಾಮಗಾರಿ ಒಂದು ವರ್ಷದಿಂದ ಅಪೂರ್ಣವಾಗಿಯೇ ಉಳಿದಿರುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಕಲಬುರಗಿ ತಹಶೀಲ್ದಾರ್ ಕೆ. ಆನಂದಶೀಲ ಅವರು ಎನ್‌ಎಚ್‌ಎಐ ಕಲಬುರಗಿ ಯೋಜನಾ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ದೀರ್ಘಕಾಲದಿಂದ ವಿಳಂಬವಾಗಿರುವುದರಿಂದ ವಾಹನಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಗಂಭೀರ ಅಡಚಣೆ ಉಂಟಾಗಿದೆ. ಅಲ್ಲದೆ, ಕಳೆದ ಒಂದು ವರ್ಷದಲ್ಲಿ ಹಲವಾರು ಅಪಘಾತಗಳಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಎನ್‌ಎಚ್‌ಎಐ ಅಧಿಕಾರಿಗೆ ತಹಶೀಲ್ದಾರ್ ನೋಟಿಸ್ ಜಾರಿಗೊಳಿಸಿದ್ದಾರೆ.

ವಿಶೇಷವಾಗಿ ಹಾಗರ್ಗಾ ರಿಂಗ್ ರಸ್ತೆ ಕ್ರಾಸ್, ಹುಮನಾಬಾದ್ ರಿಂಗ್ ರಸ್ತೆ ಕ್ರಾಸ್, ಆಜಾದಪುರ ರಿಂಗ್ ರಸ್ತೆ ಕ್ರಾಸ್ ಹಾಗೂ ಸೇಡಂ ರಿಂಗ್ ರಸ್ತೆ ಕ್ರಾಸ್‌ಗಳಲ್ಲಿ ಸಮರ್ಪಕ ಸರ್ವಿಸ್ ರಸ್ತೆ ಇಲ್ಲದಿರುವುದು ಸಾರ್ವಜನಿಕರ ಸುರಕ್ಷತೆಗೆ ಗಂಭೀರ ಅಪಾಯ ಉಂಟುಮಾಡುತ್ತಿದೆ ಎಂದು ನೋಟಿಸ್‌ನಲ್ಲಿ ತಹಶೀಲ್ದಾರ್ ತಿಳಿಸಿದ್ದಾರೆ.

ಸುಗಮ ಸಂಚಾರಕ್ಕೆ ಸರ್ವಿಸ್ ರಸ್ತೆಯಲ್ಲಿರುವ ಅಡಚಣೆ ಹಾಗೂ ತೊಡಕುಗಳನ್ನು ನಿವಾರಿಸಿ, ಬಾಕಿ ಇರುವ ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳಬೇಕು. ಕೈಗೊಂಡ ಕ್ರಮದ ಕುರಿತು ಅಕ್ಟೋಬರ್ 3ರ ಮಧ್ಯಾಹ್ನ 3 ಗಂಟೆಯೊಳಗಾಗಿ ಅನುಸರಣಾ ವರದಿ ಸಲ್ಲಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor