ಕಲಬುರಗಿ: ‘ನಮ್ಮ ಕಲಬುರಗಿ ಸಾರಿಗೆ’ ಆಪ್ ಸೇವೆ ಸ್ಥಗಿತಗೊಂಡಿರುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಕಾರ್ಮಿಕರಿಗೆ ಬಸ್‌ಗಳು ಬರುವ ಸಮಯದ ಕುರಿತು ಸರಿಯಾದ ಮಾಹಿತಿ ದೊರೆಯದೆ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಆಪ್ ಸೇವೆಯನ್ನು ಮರುಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಯುವ ಮುನ್ನಡೆ ತಂಡದ ಯುವಜನರು ಟೀ-ಶರ್ಟ್‌ ಮೇಲೆ ಸಾರ್ವಜನಿಕರಿಂದ ಸಹಿ ಸಂಗ್ರಹಿಸುವ ಮೂಲಕ ವಿಭಿನ್ನವಾಗಿ ಅಭಿಯಾನ ನಡೆಸಿದರು.

ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಿಳಿ ಟೀ-ಶರ್ಟ್ ಹಾಗೂ ಬ್ಯಾನರ್ ಮೇಲೆ ಸಾರ್ವಜನಿಕರಿಂದ ಸಹಿ ಸಂಗ್ರಹಿಸುವ ಮೂಲಕ ಕರ್ನಾಟಕ ಯುವ ಮುನ್ನಡೆ ತಂಡ ಗಮನ ಸೆಳೆಯಿತು.

‘ನಮ್ಮ ಕಲಬುರಗಿ ಸಾರಿಗೆ’ ಆಪ್ ಸೇವೆ ಸ್ಥಗಿತಗೊಂಡಿರುವುದರ ಜತೆಗೆ ನಗರದ ಸಿಟಿ ಬಸ್‌ಗಳು ಸಮಯಕ್ಕೆ ಸರಿಯಾಗಿ ವೇಳಾಪಟ್ಟಿಯಂತೆ ಸಂಚರಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಹಿರಿಯ ನಾಗರಿಕರಿಗೆ ಬಸ್‌ಗಳ ಸಂಚಾರದ ಕುರಿತು ಕನಿಷ್ಠ ಮಾಹಿತಿಯೂ ಲಭ್ಯವಾಗುತ್ತಿಲ್ಲ ಎಂದು ತಂಡದ ಸದಸ್ಯರು ಹೇಳಿದರು.

ಬಸ್‌ಗಳ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ಸಮಯಕ್ಕೆ ಹಾಜರಾಗಲು ಕಷ್ಟವಾಗುತ್ತಿದೆ. ಆದ್ದರಿಂದ ಬಸ್‌ಗಳು ನಿಗದಿತ ಸಮಯಕ್ಕೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಹಾಗೂ ‘ನಮ್ಮ ಕಲಬುರಗಿ ಸಾರಿಗೆ’ ಆಪ್ ಸೇವೆಯನ್ನು ಮರುಬಳಕೆಗೆ ತರಬೇಕು ಎಂದು ಆಗ್ರಹಿಸಿ ಕಲಬುರಗಿ ವಿಭಾಗದ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor