ಶಹಾಬಾದ್: ಕಾರ್ಮಿಕ ಇಲಾಖೆಯಿಂದ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಲಾಗಿದ್ದ ಕನಿಷ್ಠ ವೇತನವನ್ನು ತಡೆಹಿಡಿದಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಿ ಎಐಯುಟಿಯುಸಿ ವತಿಯಿಂದ ನಗರದ ಅಂಚೆ ಕಚೇರಿ ಎದುರು ಮಂಗಳವಾರ ಪತ್ರ ಚಳವಳಿ ನಡೆಸಲಾಯಿತು.

ಪತ್ರ ಚಳವಳಿಗೆ ಚಾಲನೆ ನೀಡಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಎಂ.ಜಿ., ಕಾರ್ಮಿಕ ಇಲಾಖೆಯು ಕನಿಷ್ಠ ವೇತನವನ್ನು ಪರಿಷ್ಕರಿಸಿ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಮೇ ತಿಂಗಳ 10 ದಿನಗಳ ವೇತನ ಹಾಗೂ ಜೂನ್ ತಿಂಗಳ ವೇತನವನ್ನು ಪರಿಷ್ಕೃತ ಮಾದರಿಯಲ್ಲಿ ಪಾವತಿಸಲಾಗಿತ್ತು. ಇದರಿಂದ ಕಾರ್ಮಿಕರಲ್ಲಿ ಆಶಾಭಾವನೆ ಮೂಡಿತ್ತು. ಆದರೆ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾದ ಬಳಿಕ ಹೊಸದಾಗಿ ಹೊರಡಿಸಿದ್ದ ಕನಿಷ್ಠ ವೇತನದ ಅಧಿಸೂಚನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಆರ್ಥಿಕ ಇಲಾಖೆ ಪತ್ರ ಬರೆದಿರುವುದು ಕಾರ್ಮಿಕರಿಗೆ ಆಘಾತ ಉಂಟುಮಾಡಿದೆ ಎಂದು ಹೇಳಿದರು.

ಪರಿಷ್ಕೃತ ವೇತನದ ಅಧಿಸೂಚನೆಯನ್ನು ತಡೆಹಿಡಿದಿರುವ ಪರಿಣಾಮ ಜುಲೈ ತಿಂಗಳ ವೇತನವನ್ನು ಹಳೆಯ ಮಾದರಿಯಲ್ಲಿಯೇ ಪಾವತಿಸಲಾಗಿದೆ. ಇದರಿಂದ ಬೆಲೆ ಏರಿಕೆಯ ಸಂದರ್ಭದಲ್ಲಿ ಈಗಾಗಲೇ ಸಂಕಷ್ಟದಲ್ಲಿರುವ ಗುತ್ತಿಗೆ ಕಾರ್ಮಿಕರಿಗೆ ಮತ್ತಷ್ಟು ತೊಂದರೆಯಾಗಿದೆ. ಹಳೆಯ ವೇತನವು ದಿನನಿತ್ಯದ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತಿಲ್ಲ. ಹೀಗಾಗಿ ತಡೆಹಿಡಿದಿರುವ ಪರಿಷ್ಕೃತ ಕನಿಷ್ಠ ವೇತನದ ಅಧಿಸೂಚನೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಪತ್ರ ಚಳವಳಿಯಲ್ಲಿ ಮುಖಂಡರಾದ ಗಣಪತರಾವ್ ಕೆ. ಮಾನೆ, ಗುಂಡಮ್ಮ ಮಡಿವಾಳ, ರಾಮಣ್ಣ ಎಸ್. ಇಬ್ರಾಹಿಂಪೂರ, ಜಗನ್ನಾಥ ಎಸ್.ಹೆಚ್., ಬಾಗಣ್ಣ ಬುಕ್ಕಾ, ಸಿದ್ದು ಚೌಧರಿ, ತಿಮ್ಮಯ್ಯ ಮಾನೆ, ಯಲ್ಲಪ್ಪ ಬಾಂಬೆ, ದುರ್ಗಣ್ಣ ದೇವಕರ್, ಮಾರುತಿ, ಇರಗಪ್ಪ, ರಮೇಶ್ ದೇವಕರ್, ದೇವರಾಜ ಸೇರಿದಂತೆ ಹಲವಾರು ಕಾರ್ಮಿಕರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor