ಕಲಬುರಗಿ: ಕಳೆದ ಎರಡು ದಶಕಗಳಿಂದ ನಿವೇಶನಕ್ಕಾಗಿ ಕಾಯುತ್ತಿರುವ 381 ಫಲಾನುಭವಿಗಳಿಗೆ ಕೂಡಲೇ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ್ಯಕರ್ತರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ತಾಜ್‌ಸುಲ್ತಾನ್‌ಪುರ ಸರ್ವೆ ನಂ.264/ಪಿ ಯಲ್ಲಿರುವ 9 ಎಕರೆ 24 ಗುಂಟೆ ಜಮೀನನ್ನು ಲೇಔಟ್‌ ಆಗಿ ಅಭಿವೃದ್ಧಿಪಡಿಸಿ ಫಲಾನುಭವಿಗಳಿಗೆ ನಿವೇಶನ ಕಲ್ಪಿಸಬೇಕು ಹಾಗೂ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಬಡ ನೌಕರರಿಗಾಗಿ ಹಾಸ್ಟೆಲ್ ಕಾಲೋನಿ ನಿರ್ಮಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, ಸುಮಾರು 20 ವರ್ಷಗಳ ಹಿಂದೆ ವಸತಿ ರಹಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬಳಿಕ ಮಹಾನಗರ ಪಾಲಿಕೆ ವತಿಯಿಂದ ತಾಜ್‌ಸುಲ್ತಾನ್‌ಪುರದ ಸರ್ವೆ ನಂ.264/ಪಿ ಜಾಗದಲ್ಲಿ 381 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿತ್ತು ಎಂದರು.

ಜಮೀನಿಗೆ ಸಂಬಂಧಿಸಿದ ನ್ಯಾಯಾಲಯದ ಪ್ರಕರಣದಿಂದಾಗಿ ಹಕ್ಕುಪತ್ರ ವಿತರಣೆ ವಿಳಂಬವಾಗಿತ್ತು. ಆದರೆ 2021ರ ಫೆಬ್ರುವರಿ 18ರಂದು ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿರುವುದರಿಂದ ಇದೀಗ ಹಕ್ಕುಪತ್ರ ವಿತರಿಸಲು ಯಾವುದೇ ಕಾನೂನಾತ್ಮಕ ತೊಂದರೆ ಇಲ್ಲ ಎಂದು ಹೇಳಿದರು.

ಫಲಾನುಭವಿಗಳು ತಲಾ 10 ಸಾವಿರ ರೂ. ಮೂಲ ಶುಲ್ಕ ಪಾವತಿಸಿದ್ದು, ಕೆಲವರಿಗೆ ಈಗಾಗಲೇ ಸಾಂಕೇತಿಕವಾಗಿ ಹಕ್ಕುಪತ್ರ ನೀಡಲಾಗಿದೆ. ಉಳಿದ 381 ಫಲಾನುಭವಿಗಳಿಗೂ ತಕ್ಷಣ ಹಕ್ಕುಪತ್ರ ವಿತರಿಸಿ ಕಾನೂನುಬದ್ಧ ಹಕ್ಕು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಕಲಬುರಗಿ ನಗರದ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಸುಮಾರು 250 ಮಂದಿ ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದು, ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ವೇತನ ವಿಳಂಬವಾದಾಗ ಬಾಡಿಗೆ ಪಾವತಿಸಲು ಕೂಡ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಸರ್ಕಾರಿ ಜಾಗದಲ್ಲಿ ಹಾಸ್ಟೆಲ್ ಕಾಲೋನಿ ನಿರ್ಮಿಸಿ, ಅರ್ಹ ಹೊರಗುತ್ತಿಗೆ ನೌಕರರಿಗೆ ಮನೆಗಳನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಬಡ ಹಾಗೂ ವಸತಿರಹಿತ ಕುಟುಂಬಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಹಕ್ಕುಪತ್ರ ವಿತರಣೆ ಹಾಗೂ ಹಾಸ್ಟೆಲ್ ನೌಕರರಿಗೆ ವಸತಿ ಕಲ್ಪಿಸುವ ಬೇಡಿಕೆಗಳನ್ನು ತುರ್ತಾಗಿ ಈಡೇರಿಸಬೇಕು ಎಂದು ಸಂಘದ ಮುಖಂಡರು ಮನವಿ ಮಾಡಿದರು.

ಧರಣಿಯಲ್ಲಿ ತಾಲೂಕು ಅಧ್ಯಕ್ಷೆ ಕಮಲಬಾಯಿ ಹಿರೇಮರ, ಹಾಸ್ಟೆಲ್ ಕಾರ್ಯದರ್ಶಿ ಮಹ್ಮದ್ ಜಮೀರೋದಿನ್ ಬಾಬಾ, ಉಪಾಧ್ಯಕ್ಷ ಮೇಘರಾಜ ಕಠಾರೆ, ಸಹ ಕಾರ್ಯದರ್ಶಿ ಅಲ್ಲಾಟಿ ವಾಡಿ, ಜಿಲ್ಲಾ ಕಾರ್ಯದರ್ಶಿ ಮಲ್ಲಮ್ಮ ಓಡ್ಲಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಫಲಾನುಭವಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor