ಕಲಬುರಗಿ: ನಗರದ ಜೇವರ್ಗಿ ಕಾಲೋನಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ವತಿಯಿಂದ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (KSRSAC) ಪ್ರಾದೇಶಿಕ ಕೇಂದ್ರದ ವೈಜ್ಞಾನಿಕ ಅಧಿಕಾರಿ ಸಂಗನಬಸಪ್ಪ ಏವೂರ ಭಾಗವಹಿಸಿ, ಬಾಹ್ಯಾಕಾಶ ವಿಜ್ಞಾನ ಹಾಗೂ ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಬಾಹ್ಯಾಕಾಶ ವಿಜ್ಞಾನವು ಸಂಶೋಧನೆಗೆ ಮಾತ್ರ ಸೀಮಿತವಾಗಿಲ್ಲ. ಕೃಷಿ, ಹವಾಮಾನ ಮುನ್ಸೂಚನೆ, ಸಂವಹನ, ನ್ಯಾವಿಗೇಶನ್, ವಿಪತ್ತು ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಅವರು ವಿವರಿಸಿದರು.

ಸಹ ಪ್ರಾಧ್ಯಾಪಕ ಡಾ. ಸಂಗಣ್ಣ ವಿ. ನಿಷ್ಠಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿನಿಯರು ಉತ್ಸಾಹದಿಂದ ಭಾಗವಹಿಸಿದ್ದಕ್ಕೆ ಅಭಿನಂದಿಸಿದರು.

ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿನೋದಕುಮಾರ ರಾಠೋಡ್ ಮಾತನಾಡಿ, ಭಾರತದ ಬಾಹ್ಯಾಕಾಶ ಸಾಧನೆಗಳು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿವೆ. ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ, ಪ್ರಶ್ನಿಸುವ ಮನೋಭಾವ ಹಾಗೂ ಸಂಶೋಧನಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಯುವಜನತೆಯೇ ಭಾರತದ ಬಾಹ್ಯಾಕಾಶ ಕ್ಷೇತ್ರದ ಭವಿಷ್ಯದ ಶಕ್ತಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಡೀನ್ ನಿಯಾಜ್ ಬೇಗಂ, IQAC ಸಂಯೋಜಕ ಡಾ. ಶರಣಬಸಪ್ಪ ಚಿಕ್ಕಳ್ಳಿ, ಪ್ರಾಂಶುಪಾಲ ಡಾ. ಮೋರ್ಗೆ ಪ್ರಕಾಶ್ ವಿ. ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ವಿದ್ಯಾರ್ಥಿನಿಯರಿಗೆ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಡಾ. ಓಂನಾಥ ಪಾಟೀಲ ಹಾಗೂ ಡಾ. ಗುರುನಾಥ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಿದರು.

ಉಪನ್ಯಾಸಕಿಯರಾದ ಕುಮಾರಿ ದರ್ಶನಾ ಹಾಗೂ ಡಾ. ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು. ಪೂಜಾ ಕಾಂಬಳೆ ಸಹಕರಿಸಿದರು. ಉಪನ್ಯಾಸಕ ಡಾ. ರವಿ ಪಾಟೀಲ ಅತಿಥಿಗಳನ್ನು ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor