ಕಲಬುರಗಿ : ಕೊರೋನಾ ಸಂದರ್ಭದಲ್ಲಿ ಜಾರಿಗೊಳಿಸಲಾದ ಸುತ್ತೋಲೆಯಿಂದಾಗಿ ಸೇವಾ ಅನಿಶ್ಚಿತತೆ ಎದುರಿಸುತ್ತಿರುವ ಕಲ್ಯಾಣ ಕರ್ನಾಟಕದ ಆರು ಇಲಾಖೆಗಳ ಸುಮಾರು 800 ನೌಕರರಿಗೆ ಸೇವಾ ಭದ್ರತೆ ಕಲ್ಪಿಸುವಂತೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದೆ.

ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಲಕ್ಷ್ಮಣ ದಸ್ತಿ ನೇತೃತ್ವದ ನಿಯೋಗ ರವಿವಾರ ಕಲಬುರಗಿ ನಗರದಲ್ಲಿ ಸಚಿವರನ್ನು ಭೇಟಿ ಮಾಡಿ, ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಟ್ಟಿತು.

2020ರಲ್ಲಿ ಆಗಿನ ಸರ್ಕಾರದ 371ನೇ ಜೆ ಕಲಂ ಸಂಪುಟ ಉಪಸಮಿತಿ ಜಾರಿಗೊಳಿಸಿದ ಸುತ್ತೋಲೆಯು ಸಂವಿಧಾನದ ಮೀಸಲಾತಿಯ ಮೂಲ ಉದ್ದೇಶ ಹಾಗೂ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371ನೇ ಜೆ ಕಲಂನ ಆಶಯಕ್ಕೆ ವಿರುದ್ಧವಾಗಿದೆ. ಈ ಸುತ್ತೋಲೆಯಿಂದಾಗಿ ಪ್ರದೇಶದ ಅಭ್ಯರ್ಥಿಗಳಿಗೆ ತಮ್ಮ ಪಾಲಿನ ಉದ್ಯೋಗಾವಕಾಶಗಳು ಸಮರ್ಪಕವಾಗಿ ದೊರೆಯದಂತಾಗಿದೆ ಎಂದು ಸಮಿತಿ ತಿಳಿಸಿದೆ.

ಈ ಸಮಸ್ಯೆಯನ್ನು ಸರಿಪಡಿಸಲು ಸರ್ಕಾರ 2023ರ ಫೆಬ್ರವರಿ 1ರ ಸುತ್ತೋಲೆಯಂತೆ ನೇಮಕಾತಿ ನಿಯಮಗಳನ್ನು ಜಾರಿಗೆ ತಂದಿದೆ. ಅದರನ್ವಯ ಮೆರಿಟ್ ಆಧಾರದ ಮೇಲೆ ಆರು ಇಲಾಖೆಗಳ ಸುಮಾರು 800 ಅಭ್ಯರ್ಥಿಗಳು ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಕಲಬುರಗಿ ಮತ್ತು ಬೆಂಗಳೂರು ಹೈಕೋರ್ಟ್‌ಗಳ ದ್ವಿಸದಸ್ಯ ಪೀಠದ ತೀರ್ಪಿನಿಂದ ಈ ನೌಕರರ ಸೇವೆ ಅನಿಶ್ಚಿತತೆಗೆ ಸಿಲುಕಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ನೌಕರರ ಸೇವಾ ಭದ್ರತೆಗಾಗಿ ಸರ್ಕಾರ ಸಮರ್ಥವಾಗಿ ನ್ಯಾಯಾಂಗ ಹೋರಾಟ ನಡೆಸುವುದರ ಜೊತೆಗೆ ರಾಜಕೀಯ ಇಚ್ಛಾಶಕ್ತಿಯನ್ನೂ ಪ್ರದರ್ಶಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.

ಮನವಿಗೆ ಸ್ಪಂದಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಈ ವಿಷಯದ ಕುರಿತು ಸಂಪೂರ್ಣ ಅರಿವಿದ್ದು, ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಮನೀಷ ಜಾಜು, ರೌಫ್ ಖಾದ್ರಿ, ಕುಮಾರ ಮಠ, ಶಿವಕುಮಾರ ಪಾಟೀಲ, ಮಹಿಬೂಬ್, ಕಾಶಿನಾಥ ಬಿರಾದಾರ, ದೇವಪ್ಪ, ವಿಶ್ವನಾಥ ಮಾಳಗೆ, ಮಾಳಪ್ಪ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor