ಕಲಬುರಗಿ: ಇಷ್ಟು ದಿನ ಇವಿಎಂ ಸರಿಯಿಲ್ಲ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್, ಈಗ ಎಸ್‌ಐಆರ್ ಸರಿಯಿಲ್ಲ ಎಂದು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ. ಚುನಾವಣಾ ಆಯೋಗ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾಂಗ್ರೆಸ್ ಕಾನೂನಿನ ಚೌಕಟ್ಟನ್ನು ಮೀರಿ ನಡೆದುಕೊಳ್ಳುತ್ತಿದೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 9ರಿಂದ 30ರವರೆಗೆ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಎಂಬ ಘೋಷವಾಕ್ಯದೊಂದಿಗೆ ಯುವ ಸಂವಾದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಸುಮಾರು 100 ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ 30 ವರ್ಷದೊಳಗಿನ ಯುವಜನರೊಂದಿಗೆ ಸಂವಾದ ನಡೆಸಿ, ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ಎಸ್‌ಐಆರ್ ವಿಚಾರದಲ್ಲಿ ಕಾಂಗ್ರೆಸ್ ನಡೆಸುತ್ತಿದೆ ಎನ್ನಲಾದ ಹುನ್ನಾರಗಳನ್ನು ಜನರಿಗೆ ತಿಳಿಸಲಾಗುವುದು ಎಂದರು.

ಸಂಸದ ತೇಜಸ್ವಿ ಸೂರ್ಯ ಅವರು ಹುಬ್ಬಳ್ಳಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಾಜ್ಯದ 500 ಸ್ಥಳಗಳಲ್ಲಿ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.

ಸ್ಟಿಂಗ್ ಆಪರೇಷನ್ ಪ್ರಕರಣದ ಸತ್ಯ ಹೊರಬರಲಿ :

ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಪೊಲೀಸ್ ಆಯುಕ್ತರು ನೀಡಿರುವ ಹೇಳಿಕೆಗಳ ಹಿಂದಿನ ಸತ್ಯ ಹೊರಬರಬೇಕು. ಪ್ರಕರಣದ ತನಿಖೆ ಸರಿಯಾದ ಮಾರ್ಗದಲ್ಲಿ ನಡೆಯಬೇಕು ಎಂದು ಾವರು ಆಗ್ರಹಿಸಿದರು.

ಜನಾದೇಶದ ಮೂಲಕವೇ ರಾಜಕೀಯ ಪಕ್ಷಗಳ ಸೋಲು-ಗೆಲುವು ನಿರ್ಧಾರವಾಗಬೇಕು. ಸ್ಟಿಂಗ್ ಆಪರೇಷನ್ ಅಥವಾ ಅನೈತಿಕ ಮಾರ್ಗಗಳ ಮೂಲಕ ರಾಜಕೀಯ ಫಲಿತಾಂಶ ನಿರ್ಧರಿಸುವ ಪ್ರಯತ್ನ ನಡೆಯಬಾರದು ಎಂದರು.

ಸ್ಟಿಂಗ್ ಆಪರೇಷನ್ ವಿಡಿಯೊ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸದಿಂದ ಅಪ್‌ಲೋಡ್ ಆಗಿರುವ ಕುರಿತು ಅವರೇ ಉತ್ತರಿಸಬೇಕು. ತನಿಖೆ ಸರಿಯಾಗಿ ನಡೆದರೆ ಸ್ವಾಗತಿಸುತ್ತೇವೆ. ಇಲ್ಲದಿದ್ದರೆ ಪ್ರಶ್ನಿಸುತ್ತೇವೆ. ಧರ್ಮಸ್ಥಳ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆದರೆ, ಸ್ಟಿಂಗ್ ಪ್ರಕರಣದಲ್ಲಿ ಒಂದು ವಾರದಲ್ಲೇ ತನಿಖೆ ನಡೆಯುತ್ತಿರುವುದು ಗಮನಾರ್ಹ. ತನಿಖೆ ಪಾರದರ್ಶಕವಾಗಿ ನಡೆಯಬೇಕು ಎಂದು ಹೇಳಿದರು.

ರೈತರ ಪರಿಹಾರ ವಿತರಣೆಯಲ್ಲಿ ಷರತ್ತುಗಳ ಆರೋಪ :

ಬರಗಾಲದ ಹಿನ್ನೆಲೆಯಲ್ಲಿ ಬಿಜೆಪಿ ತಂಡಗಳು ರಾಜ್ಯದ ವಿವಿಧೆಡೆ ಪ್ರವಾಸ ನಡೆಸಿದ್ದು, ಪಕ್ಷದ ರಾಜ್ಯಾಧ್ಯಕ್ಷರು ಸ್ವತಃ ಹತ್ತು ದಿನಗಳ ಕಾಲ ಪಾದಯಾತ್ರೆ ನಡೆಸಿದ್ದಾರೆ. ರೈತರಿಗೆ ಪರಿಹಾರ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿದೆ ಎಂದು ಆರೋಪಿಸಿದರು.

ರೈತರಿಗೆ 2,500 ರೂ. ಪರಿಹಾರ ನೀಡಲು ಜಂಟಿ ಜಮೀನು, ಒತ್ತುವರಿ ಹಾಗೂ ಸಾಲ ಮರುಪಾವತಿಯಂತಹ ಷರತ್ತುಗಳನ್ನು ವಿಧಿಸಲಾಗಿದೆ. ಇವುಗಳನ್ನು ಪೂರೈಸಲು ಸಾಧ್ಯವಾಗದ ರೈತರಿಗೆ ಪರಿಹಾರ ಸಿಗದಂತಾಗಿದೆ ಎಂದು ದೂರಿದರು.

ಕಳೆದ ಮೂರು ವರ್ಷಗಳಿಂದ ಹಾಲಿನ ದರವನ್ನು 17 ರೂ. ಹೆಚ್ಚಿಸಲಾಗಿದೆ. ಜೂನ್‌ನಿಂದ ಹಾಲಿನ ಮೇಲಿನ ಸಬ್ಸಿಡಿಯನ್ನೂ ಇನ್ನೂ ನೀಡಿಲ್ಲ. ಮತ್ತೊಮ್ಮೆ ದರ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆ ಹಾಕಲಾಗುತ್ತಿದೆ ಎಂದು ಟೀಕಿಸಿದರು.

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಆಕ್ಷೇಪ :

ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲರಿಗೂ ಸಮಾನವಾಗಿ ಸೌಲಭ್ಯ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್, ನಂತರ ಷರತ್ತುಗಳನ್ನು ವಿಧಿಸಿತ್ತು. ಈಗ ಪರಿಷ್ಕರಣೆಯ ಹೆಸರಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸಬಹುದು, ಆದರೆ ಎಸ್‌ಐಆರ್ ಮಾಡಬಾರದು ಎಂಬ ಕಾಂಗ್ರೆಸ್‌ನ ನಿಲುವು ದ್ವಂದ್ವದಿಂದ ಕೂಡಿದೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ. ಅವಿನಾಶ್ ಜಾಧವ್, ಮಾಜಿ ಸಂಸದ ಉಮೇಶ್ ಜಾಧವ್, ಸುಭಾಷ್ ಗುತ್ತೇದಾರ್, ಬಿಜೆಪಿ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಶರಣಪ್ಪ ತಳವಾರ್, ನಿತಿನ್ ಗುತ್ತೇದಾರ್, ಅವಣ ಮ್ಯಾಕೇರಿ, ಶೋಭಾ ಭರಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor