ಕಲಬುರಗಿ; ಕನ್ನಡ ಭಾಷೆಯ ಮೇಲೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು. ಆದರೆ ಯಾವುದೇ ಭಾಷೆಯನ್ನು ಅವಹೇಳನ ಮಾಡಬಾರದು. ಕನ್ನಡ ಸಂಸ್ಕೃತಿ ಎಲ್ಲ ಭಾಷೆಗಳನ್ನು ಗೌರವಿಸುವ ವಿಶಾಲ ಮನೋಭಾವ ಹೊಂದಿದೆ ಎಂದು ಶಾಸಕ ಎಂ.ವೈ. ಪಾಟೀಲ್‌ ಹೇಳಿದರು.

ಅಫಜಲಪುರ ಪಟ್ಟಣದ ಸರಕಾರಿ ಪ್ರೌಢಶಾಲೆ ಆವರಣದ ಗುರುಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

"ಕನ್ನಡ ನಾಡು, ನುಡಿ ಹಾಗೂ ಭಾಷೆಯನ್ನು ಗೌರವಿಸುವುದರ ಜೊತೆಗೆ ನಮ್ಮ ನೆಲ-ಜಲವನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕನ್ನಡ ಭಾಷೆಗೆ ಪ್ರಾಚೀನ ಇತಿಹಾಸ ಹಾಗೂ ಶ್ರೀಮಂತ ಪರಂಪರೆ ಇದ್ದು, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು," ಎಂದು ಹೇಳಿದರು.

ಕನ್ನಡ ಯಾವುದೇ ಭಾಷೆಗಿಂತ ಕಡಿಮೆಯಲ್ಲ. ಇತರ ಭಾಷೆಗಳನ್ನೂ ಗೌರವಿಸುವ ಗುಣ ಕನ್ನಡ ಸಂಸ್ಕೃತಿಯಲ್ಲಿದೆ. ಭಾಷೆಯ ಹೆಸರಿನಲ್ಲಿ ಭೇದಭಾವ ಮಾಡದೆ ಕನ್ನಡದ ಹಿರಿಮೆಯನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.

ಮಹಾರಾಷ್ಟ್ರ ರಾಜ್ಯದಲ್ಲಿರುವ ಕನ್ನಡ ಶಾಲೆಗಳ ಉಳಿವಿಗಾಗಿ ಕರ್ನಾಟಕ ಸರ್ಕಾರ ಹೆಚ್ಚಿನ ಉತ್ತೇಜನ ಹಾಗೂ ಅಗತ್ಯ ನೆರವು ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ತಹಶೀಲ್ದಾರ್ ಸಂಜೀವಕುಮಾರ್‌ ದಾಸರ ಮಾತನಾಡಿ, ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದರು.

1956ರ ನವೆಂಬರ್ 1ರಂದು ಭಾಷಾವಾರು ಪ್ರಾಂತ್ಯಗಳ ಪುನರ್‌ರಚನೆಯ ಫಲವಾಗಿ ಮೈಸೂರು ರಾಜ್ಯ ಉದಯವಾಯಿತು. ಅದರ ಸ್ಮರಣಾರ್ಥ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಕನ್ನಡವೆಂದರೆ ಕೇವಲ ಭಾಷೆಯಲ್ಲ, ಅದು ಭಾವನೆ, ಸಂಸ್ಕೃತಿ ಹಾಗೂ ಬಂಧುತ್ವದ ಸಂಕೇತವಾಗಿದೆ," ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕನ್ನಡವನ್ನು ಬಿಟ್ಟು ಇಂಗ್ಲಿಷ್ ವ್ಯಾಮೋಹದ ಕಡೆಗೆ ಹೆಚ್ಚು ಒಲವು ತೋರುತ್ತಿರುವುದು ಬೇಸರದ ಸಂಗತಿ. ಮಕ್ಕಳನ್ನು ಕನ್ನಡದಲ್ಲಿ ಓದಿಸಿ, ಭಾಷೆಯ ಹಿರಿಮೆ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಪಂಚ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಪ್ರಕಾಶ ಜಮಾದಾರ ವಿಶೇಷ ಉಪನ್ಯಾಸ ನೀಡಿ,  ಕನ್ನಡದ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿಯಾಗಿದೆ. ಕನ್ನಡವನ್ನು ಪ್ರೀತಿಸಿ, ಗೌರವಿಸಿ, ದೈನಂದಿನ ಬದುಕಿನಲ್ಲಿ ಬಳಸುವ ಮೂಲಕ ಭಾಷೆಯನ್ನು ಬೆಳೆಸಬೇಕು ಎಂದರು.

ಈ ಸಂದರ್ಭದಲ್ಲಿ ಸಿಪಿಐ ಲಖನ್ ಮಸಗುಪ್ಪಿ, ಪಿಎಸ್‌ಐ ವಿಜಯಕುಮಾರ ನಾಯ್ಕ, ತೋಟಗಾರಿಕೆ ಇಲಾಖೆ ಅಧಿಕಾರಿ ಶಂಕರಗೌಡ ಪಾಟೀಲ, ಕೃಷಿ ಇಲಾಖೆ ಅಧಿಕಾರಿ ಎಸ್.ಎಚ್. ಗಡಗಿಮನಿ, ಸಿಡಿಪಿಒ ಪ್ರೇಮನಂದ, ಪಶು ಇಲಾಖೆ ಅಧಿಕಾರಿ ಕೆ.ಎಂ. ಕೋಟೆ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಭಾವತಿ ಮೇತ್ರಿ, ಪ್ರಾಧಿಕಾರ ಅಧ್ಯಕ್ಷ ಚಂದು ಕರಜಗಿ, ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಅಣ್ಣರಾಯ ಜಮಾದಾರ, ಕರವೇ ಅಧ್ಯಕ್ಷ ಶ್ರೀಕಾಂತ ದಿವಾಣಜಿ, ಜೈ ಕರವೇ ಅಧ್ಯಕ್ಷ ಸುರೇಶ ಅವಟೆ, ಕರವೇ ಜಿಲ್ಲಾ ಸಂಘಟನೆ ಕಾರ್ಯದರ್ಶಿ ಸೌಮ್ಯ ಪಟ್ನೆ, ಮಹಿಳಾ ಅಧ್ಯಕ್ಷೆ ಪ್ರೀಯಾಂಕ ಕೋರಿ, ಉಮೇಶ ಅಂದೋಡಗಿ, ಸಿದ್ದರಾಮ ಸುಲ್ತಾನಪೂರ, ಮಹೇಶ ಆಲೇಗಾಂವ, ಔರಂಗಜೇಬ್ ಮುಜಾವರ, ದತ್ತು ಜಮಾದಾರ, ಯಲ್ಲಾಲಿಂಗ ಜಮಾದಾರ, ಸೋಮು ನಾಯ್ಕೋಡಿ, ಬಿ.ಎಂ. ರಾವ್ ಸೇರಿದಂತೆ ವಿವಿಧ ಶಾಲಾ ಮಕ್ಕಳು ಶಿಕ್ಷಕರು ಇದ್ದರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಅಧಿಕಾರಿ ರೇವಣಸಿದ್ದ ತಾವರಖೇಡ ಸ್ವಾಗತಿಸಿದರು. ಶಿಕ್ಷಕಿ ಅರ್ಚನಾ ಜೈನ್  ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor