ಕಲಬುರಗಿ | HRMS-2ನಲ್ಲಿ ಸರ್ಕಾರಿ ನೌಕರರ ಕುಟುಂಬದ ಅವಲಂಬಿತರ ಮಾಹಿತಿ ಸೇರ್ಪಡೆಗೆ ಒತ್ತಾಯ
ಕಲಬುರಗಿ: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ಸರ್ಕಾರಿ ನೌಕರರು, ಅಧಿಕಾರಿಗಳು ಹಾಗೂ ಅವರ ಕುಟುಂಬದ ಅವಲಂಬಿತರಿಗೆ ತುರ್ತು ಸಂದರ್ಭದಲ್ಲಿ ನಗದು ರಹಿತ ಚಿಕಿತ್ಸೆ ದೊರೆಯುವಂತೆ HRMS-2ನಲ್ಲಿ ಅಗತ್ಯ ಮಾಹಿತಿಯನ್ನು ತಕ್ಷಣವೇ ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿ ಸರ್ಕಾರಿ ನೌಕರರ ಸಂಘದ ವತಿಯಿಂದ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ, HRMSನಲ್ಲಿ ಕುಟುಂಬದ ಅವಲಂಬಿತರ ಮಾಹಿತಿ ಲಭ್ಯವಿಲ್ಲ ಎಂಬ ಕಾರಣ ನೀಡಿ ಕೆಲವು ಆಸ್ಪತ್ರೆಗಳು ನಗದು ರಹಿತ ಚಿಕಿತ್ಸಾ ಸೌಲಭ್ಯ ನೀಡದೆ, ಚಿಕಿತ್ಸೆಗಾಗಿ ಹಣ ಪಾವತಿಸುವಂತೆ ಮಾಡುತ್ತಿವೆ. ಇದರಿಂದ ಸರ್ಕಾರಿ ನೌಕರರು ಅನಿವಾರ್ಯವಾಗಿ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಬೇಕಾಗುತ್ತಿದ್ದು, ಆರ್ಥಿಕವಾಗಿ ತೀವ್ರ ನಷ್ಟ ಅನುಭವಿಸುವಂತಾಗಿದೆ ಎಂದು ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಮಟ್ಟದ ಡಿಡಿಓಗಳು ತಮ್ಮ ಅಧೀನದಲ್ಲಿರುವ ಎಲ್ಲಾ ಸರ್ಕಾರಿ ನೌಕರರು, ಸಿಬ್ಬಂದಿ, ಶಿಕ್ಷಕರು ಹಾಗೂ ಅವರ ಕುಟುಂಬದ ಅವಲಂಬಿತರ ಸಂಪೂರ್ಣ ಮಾಹಿತಿಯನ್ನು HRMS-2ನಲ್ಲಿ ಯಾವುದೇ ವಿಳಂಬವಿಲ್ಲದೆ ಸೇರ್ಪಡೆಗೊಳಿಸುವಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಸೌಲಭ್ಯ ಅರ್ಹ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತರಿಗೆ ತುರ್ತು ಸಂದರ್ಭದಲ್ಲಿ ಯಾವುದೇ ಆರ್ಥಿಕ ಹೊರೆಯಾಗದಂತೆ ನಗದು ರಹಿತವಾಗಿ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಹಾಗೂ ಡಿಡಿಓಗಳು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬಸವರಾಜ್ ಬಳೂಂಡಗಿ, ಖಜಾಂಚಿ ಶ್ರೀಮಂತ್ ಪಟ್ಟದಾರ್, ಕಾರ್ಯದರ್ಶಿ ಚಂದ್ರಕಾಂತ್ ಏರಿ, ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಯ ಜವಳಿ, ಕಾರ್ಯಾಧ್ಯಕ್ಷರಾದ ಕೃಷ್ಣಾಚಾರಿ, ಹಿರಿಯ ಉಪಾಧ್ಯಕ್ಷರಾದ ಸುರೇಶ್ ಬಗೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಮಠಪತಿ ಹಾಗೂ ರಾಜ್ಯ ಜಂಟಿ ನಿರ್ದೇಶಕರಾದ ಅಣ್ಣಾರಾವ ಹಾಬಾಳಕರ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.