Kalaburagi | ‘ಮಣ್ಣು–ನೀರು ಉಳಿಸಿ, ಭವಿಷ್ಯ ಉಳಿಸಿ’: ವಾಲ್ಮಿ ಕಾರ್ಯಾಗಾರ
ಕಲಬುರಗಿ: ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡ ವತಿಯಿಂದ ಜಲ ಮೂಲಗಳ ಸಂರಕ್ಷಣೆ, ಮಣ್ಣು ಮತ್ತು ಮಳೆ ನೀರು ಕೊಯ್ಲು ಕುರಿತು ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಕೃಷಿ ಮಹಾವಿದ್ಯಾಲಯದ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಕೃಷಿ ಮಹಾವಿದ್ಯಾಲಯದ ಡೀನ್ ಹಾಗೂ ಆವರಣ ಮುಖ್ಯಸ್ಥರಾದ ಡಾ. ಬಿ.ಎಂ. ದೊಡಮನಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಳೆ ನೀರು ಕೊಯ್ಲು ಸೇರಿದಂತೆ ನೀರಿನ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಮಳೆ ನೀರಿನ ಮಹತ್ವವನ್ನು ಅರಿತುಕೊಂಡು, ಮಣ್ಣು ಮತ್ತು ನೀರಿನ ಸಂರಕ್ಷಣೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಧಾರವಾಡದ ನಿರ್ದೇಶಕ ಡಾ. ಗಿರೀಶ ಎಸ್. ಮರಡ್ಡಿ ಮಾತನಾಡಿ, ಮಣ್ಣು ಸಸ್ಯಗಳ ಬೆಳವಣಿಗೆಗೆ ಮೂಲಾಧಾರವಾಗಿದ್ದು, ಆರೋಗ್ಯಕರ ಮಣ್ಣು ಉತ್ತಮ ಗುಣಮಟ್ಟದ ಆಹಾರ ಉತ್ಪಾದನೆಗೆ ಅತ್ಯವಶ್ಯಕವಾಗಿದೆ ಎಂದರು.
ಮಣ್ಣು ಮತ್ತು ನೀರು ಅಮೂಲ್ಯ ನೈಸರ್ಗಿಕ ಸಂಪನ್ಮೂಲಗಳಾಗಿದ್ದು, ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಣ್ಣಿನ ಆರೋಗ್ಯ, ನೀರು ಮತ್ತು ಮಣ್ಣಿನ ಸಂರಕ್ಷಣೆ ಹಾಗೂ ಮಳೆ ನೀರು ಕೊಯ್ಲಿನ ವಿವಿಧ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
‘ಮಣ್ಣು–ನೀರು ಉಳಿಸಿ, ಭವಿಷ್ಯ ಉಳಿಸಿ’ ಎಂಬ ಸಂದೇಶವನ್ನು ವಿದ್ಯಾರ್ಥಿಗಳ ಮೂಲಕ ಸಮಾಜಕ್ಕೆ ತಲುಪಿಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ ಎಂದು ಡಾ. ಗಿರೀಶ ಎಸ್. ಮರಡ್ಡಿ ಹೇಳಿದರು.
ಕಾರ್ಯಾಗಾರದಲ್ಲಿ ಕೃಷಿ ತಾಂತ್ರಿಕತೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ರೆಡ್ಡಿ ಅವರು ಮಳೆ ನೀರು ಕೊಯ್ಲಿನ ವಿವಿಧ ವಿಧಾನಗಳು ಹಾಗೂ ಅದರ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರ, ಕಲಬುರಗಿಯ ಸಹ ಸಂಶೋಧನಾ ನಿರ್ದೇಶಕ ಡಾ. ಬಿ.ವಿ. ತೆಂಬೂರ್ನೆ, ಕೃಷಿ ಮಹಾವಿದ್ಯಾಲಯದ ಬೇಸಾಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪಂಡಿತ ಎಸ್. ರಾಠೋಡ ಹಾಗೂ ಕೃಷಿ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಚಪ್ಪ ವಿ. ಹಾವೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕೃಷಿ ಕೀಟಶಾಸ್ತ್ರ ವಿಭಾಗದ ಘಟಕ ಮುಖ್ಯಸ್ಥ ಡಾ. ರಾಚಪ್ಪ ವಿ. ಹಾವೇರಿ ಸ್ವಾಗತಿಸಿದರು. ವಾಲ್ಮಿಯ ಸಮಾಲೋಚಕ ಫಕೀರೇಶ ಅಗಡಿ ಕಾರ್ಯಕ್ರಮ ನಿರೂಪಿಸಿದರು. ಸಹ ಪ್ರಾಧ್ಯಾಪಕ ಡಾ. ಗುರುರಾಜ ಪಾಟೀಲ ವಂದನಾರ್ಪಣೆ ಸಲ್ಲಿಸಿದರು.