ಯಡ್ರಾಮಿ: ಶೌಚಾಲಯವಿದ್ದರೂ ತಡೆಗೋಡೆ ಇಲ್ಲದೆ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಮುಜುಗರ ಮತ್ತು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ ಎಂದು ಆರೋಪಿಸಿ ಪಟ್ಟಣದ 2, 3 ಹಾಗೂ 6ನೇ ವಾರ್ಡಿನ ನೂರಾರು ಮಹಿಳೆಯರು ಸೋಮವಾರ ದಿಢೀರ್ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿ, ಭಿತ್ತಿಪತ್ರ ಪ್ರದರ್ಶಿಸಿ ಪಟ್ಟಣ ಪಂಚಾಯಿತಿ ಆಡಳಿತದ ವಿರುದ್ಧ ಘೋಷಣೆ ಕೂಗಿದರು.

ಸುಮಾರು 6 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ವಾರ್ಡುಗಳಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಅಗತ್ಯ ಪ್ರಮಾಣದ ಸಾರ್ವಜನಿಕ ಶೌಚಾಲಯಗಳಿಲ್ಲ. ಪೊಲೀಸ್ ಠಾಣೆ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಹೆಣ್ಣು ಮಕ್ಕಳ ಶಾಲೆಯ ಶೌಚಾಲಯಕ್ಕೂ ಸೂಕ್ತ ತಡೆಗೋಡೆ ನಿರ್ಮಿಸದಿರುವುದರಿಂದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಗೌಪ್ಯತೆ ಹಾಗೂ ಸುರಕ್ಷತೆಗೆ ಧಕ್ಕೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಈ ಸಮಸ್ಯೆ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಶಾಶ್ವತ ಪರಿಹಾರ ಕಲ್ಪಿಸಿಲ್ಲ. ಶೌಚಾಲಯ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿ ಅತಿಕ್ರಮಣ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಕೂಡಲೇ ಅತಿಕ್ರಮಣವನ್ನು ತೆರವುಗೊಳಿಸಿ ಸಂಪೂರ್ಣ ಜಾಗಕ್ಕೆ ಕಾಂಪೌಂಡ್ ನಿರ್ಮಿಸಬೇಕು ಎಂದು ಮಹಿಳೆಯರು ಆಗ್ರಹಿಸಿದರು.

ಶೌಚಾಲಯ ನಿರ್ಮಾಣಕ್ಕೆ ಕ್ಷೇತ್ರದ ಶಾಸಕರಿಂದ 10 ಲಕ್ಷ ಅನುದಾನ ಮಂಜೂರಾಗಿದ್ದರೂ ಕಾಮಗಾರಿ ಆರಂಭವಾಗಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾಮಗಾರಿ ಆರಂಭಿಸುವ ಕುರಿತು ಲಿಖಿತ ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್ ಅವರು ಪ್ರತಿಭಟನಾಕಾರರ ಅಹವಾಲು ಆಲಿಸಿ, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.

ಪ್ರತಿಭಟನೆಯಿಂದ ಪಟ್ಟಣದಲ್ಲಿ ಕೆಲಕಾಲ ವಾಹನ ಸಂಚಾರ ಹಾಗೂ ವ್ಯಾಪಾರ ವಹಿವಾಟು ಅಸ್ತವ್ಯಸ್ತಗೊಂಡಿತ್ತು. ಈ ವೇಳೆ ಸಾಹೇಬಗೌಡ ದೇಸಾಯಿ, ವಿಶ್ವನಾಥಗೌಡ ಮಾಗಣಗೇರಿ, ಕಾಶಿನಾಥ್ ಗೌಡ, ರಹಿಮ್ ಹೊಸಮನಿ, ನಿಂಗಪ್ಪ ಚೀಲ ಆನಂದ ಕುಸ್ತಿ, ಬೋರಮ್ಮ, ಸರಿಪಾ ಚಿಂಚೋಳಿ, ದಾವಲಬಿ ಬಾಗವಾನ, ಭಾಗಮ್ಮ ಚೀಲಾ, ಜ್ಯೋತಿ ಮೇಲಿನಮಠ, ಗಂಗಾಬಾಯಿ ಮೇಲಿನಮಠ, ಚೈನಾ ಚೌದರಿ, ಬಸಲಿಂಗಮ್ಮ, ಶ್ರೀದೇವಿ ಚೀಲಾ, ಸಿದ್ದಮ್ಮ ಉಪ್ಪಾರ ಸೇರಿದಂತೆ ಹಲವು ಮಹಿಳೆಯರು ಹಾಗೂ ವಾರ್ಡ್ ನಿವಾಸಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor