Kalaburagi | ಆಮ್ಲೆಟ್ ವಿಚಾರಕ್ಕೆ ಜಗಳ : ಆಟೋ ಚಾಲಕನ ಹತ್ಯೆ
ಮುಹಮ್ಮದ್ ರಯೀಸ್
ಕಲಬುರಗಿ: ಆಮ್ಲೆಟ್ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಆಟೋ ಚಾಲಕನೊಬ್ಬನ ಬರ್ಬರ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ನಗರದ ಗಂಜ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ನೂರ್‌ಬಾಗ್ ಬಡಾವಣೆಯ ನಿವಾಸಿ ಹಾಗೂ ಆಟೋ ಚಾಲಕನಾಗಿದ್ದ ಮುಹಮ್ಮದ್ ರಯೀಸ್ (30) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ರಯೀಸ್ ಎಂದಿನಂತೆ ಮಂಗಳವಾರವೂ ಆಟೋ ಚಾಲನೆ ಮಾಡಿದ್ದು, ರಾತ್ರಿ ಸುಮಾರು 10 ಗಂಟೆ ವೇಳೆಗೆ ನೆಹರು ಗಂಜ್ ಸಮೀಪದ ಬಾರ್‌ವೊಂದರ ಬಳಿಯಿರುವ ಆಮ್ಲೆಟ್ ಅಂಗಡಿಗೆ ತೆರಳಿದ್ದರು. ಈ ವೇಳೆ ಅಲ್ಲಿಯೇ ಮದ್ಯಪಾನ ಮಾಡುತ್ತಿದ್ದ ಕೆಲ ಯುವಕರೊಂದಿಗೆ ಆಮ್ಲೆಟ್ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ.
ಕ್ಷಣಾರ್ಧದಲ್ಲೇ ವಾಗ್ವಾದ ತಾರಕಕ್ಕೇರಿದ್ದು, ಕೋಪಗೊಂಡ ದುಷ್ಕರ್ಮಿಗಳು ತಮ್ಮ ಬಳಿ ಇದ್ದ ಮಾರಕಾಸ್ತ್ರಗಳಿಂದ ರಯೀಸ್ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ದುಷ್ಕರ್ಮಿಗಳು ರಯೀಸ್ ಅವರ ಹೊಟ್ಟೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಇರಿದು ಗಂಭೀರವಾಗಿ ಗಾಯಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಯೀಸ್ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ, ತೀವ್ರ ರಕ್ತಸ್ರಾವ ಮತ್ತು ಗಂಭೀರ ಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಚೌಕ್ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಮತ್ತು ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಿದ್ದಾರೆ.