Kalaburagi | ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಜೈಲು, 55 ಸಾವಿರ ರೂ. ದಂಡ
ಸಾಂದರ್ಭಿಕ ಚಿತ್ರ (AI)
ಕಲಬುರಗಿ: 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ಘೋಷಿಸಿರುವ ಕಲಬುರಗಿಯ ವಿಶೇಷ ಪೋಕ್ಸೊ ನ್ಯಾಯಾಲಯ, 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 55 ಸಾವಿರ ರೂ. ದಂಡ ವಿಧಿಸಿದೆ.
ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಂಚೂರ ಗ್ರಾಮದ ನಿವಾಸಿ ಆಂಜನೇಯ ಭೀಮಾಶಂಕರ ಒಡೆಯರ (25) ಶಿಕ್ಷೆಗೆ ಗುರಿಯಾದ ಆರೋಪಿ.
ಪ್ರಕರಣದ ವಿವರಗಳ ಪ್ರಕಾರ, ಆರೋಪಿ ಅಪ್ರಾಪ್ತ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ, ಜೀವ ಬೆದರಿಕೆ ಒಡ್ಡಿ ತನ್ನೊಂದಿಗೆ ಕರೆದುಕೊಂಡು ಹೋಗಿದ್ದನು. ಬಳಿಕ ಚಿತ್ತಾಪುರ ಸಮೀಪದ ಜೋಳದ ಹೊಲದಲ್ಲಿ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದಲ್ಲದೆ, ಯಾದಗಿರಿ ಮಾರ್ಗವಾಗಿ ಬೆಂಗಳೂರಿಗೆ ಕರೆದೊಯ್ದು ಹಲವು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದು ತನಿಖೆಯಲ್ಲಿ ಬಹಿರಂಗಗೊಂಡಿತ್ತು.
ಪ್ರಕರಣದ ತನಿಖೆ ನಡೆಸಿದ ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ ಅವರು ಸಂಗ್ರಹಿಸಿದ ಸಾಕ್ಷ್ಯಾಧಾರಗಳು, ವೈದ್ಯಕೀಯ ವರದಿಗಳು ಹಾಗೂ ಸಾಕ್ಷಿದಾರರ ಹೇಳಿಕೆಗಳ ಆಧಾರದ ಮೇಲೆ ಆರೋಪಿತನ ವಿರುದ್ಧದ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾದವು.
ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ವಿಶೇಷ ಪೋಕ್ಸೊ ನ್ಯಾಯಾಲಯ-ಎಫ್‌ಟಿಎಸ್‌ಸಿ-1)ದ ನ್ಯಾಯಾಧೀಶ ಎಸ್.ಎಲ್. ಚವ್ಹಾಣ ಅವರು, ಪೋಕ್ಸೊ ಕಾಯ್ದೆಯ ಕಲಂ 6ರ ಅಡಿಯಲ್ಲಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ಬಿಎನ್‌ಎಸ್ ಕಲಂ 137(2) ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಕಲಂ 127(3) ಅಡಿಯಲ್ಲಿ 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ಹಾಗೂ ಕಲಂ 351(2) ಅಡಿಯಲ್ಲಿ 1 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಒಟ್ಟಾರೆ ಆರೋಪಿಗೆ 55 ಸಾವಿರ ರೂ. ದಂಡ ವಿಧಿಸಲಾಗಿದೆ.
ಇದಲ್ಲದೆ, ನೊಂದ ಬಾಲಕಿಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ 5 ಲಕ್ಷ ರೂ. ಪರಿಹಾರಧನ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದ ಮಂಡಿಸಿದ್ದರು.