ಕಲಬುರಗಿ| ಜಿ.ಪಂ. ಕಚೇರಿಯಲ್ಲಿ ಜಿಲ್ಲಾ ಮಟ್ಟದ ರೈತ ದಿನಾಚರಣೆ ಕಾರ್ಯಕ್ರಮ
ಕಲಬುರಗಿ: ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿಕ ಸಮಾಜ ಇವುಗಳ ಸಂಯುಕ್ತ ಆಶ್ರಯದಲ್ಲಿ 2025-26 ನೇ ಸಾಲಿನ ಜಿಲ್ಲಾ ಮಟ್ಟದ ರೈತ ದಿನಾಚರಣೆ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲಾ ಪಂಚಾಯತ (ಹಳೆ) ಸಭಾಂಗಣಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಯಿತು.
ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು, ಕಲಬುರಗಿ ಜಿಲ್ಲೆಗೆ ಅತಿವೃಷ್ಠಿಯಿಂದಾಗಿ 498.73 ಕೋಟಿ ರೂ. ಬೆಳೆಹಾನಿ ಪರಿಹಾರ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷರಾದ ಸಿದ್ರಾಮಪ್ಪ ಪಾಟೀಲ್ ದಂಗಾಪೂರ ಅವರು ಮಾತನಾಡಿ, ಕೃಷಿಕ ಸಮಾಜ ನಡೆಸಿಕೊಂಡು ಬಂದ ಚಟುವಟಿಕೆಗಳು ಹಾಗೂ ಜಿಲ್ಲೆಯ ರೈತರಿಗೆ ಸರ್ಕಾರದಿಂದ ನೀಡಲಾದ ಬೆಳೆಹಾನಿ ಪರಿಹಾರ, ಬೆಳೆವಿಮೆ ಹಾಗೂ ಇತರೆ ವಿಷಯಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಅವರು ಮಾತನಾಡಿ, ಜಿಲ್ಲೆಯ ರೈತರಲ್ಲಿ ಬೆಳೆವಿಮೆ ಕುರಿತಂತೆ ಸಾಕಷ್ಟು ಅರಿವು ಮೂಡಿಸಲಾಗಿದೆ. ಕಲಬುರಗಿ ರೊಟ್ಟಿ ಕಾರ್ಯಕ್ರಮ ಪಾರಂಭಿಸಿದಾಗಿನಿಂದ ಸಾಕಷ್ಟು ರೈತ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ನೀಡಿದಂತಾಗಿದೆ ಎಂದು ತಿಳಿಸಿದರು.
ಕಲಬುರಗಿ ಜಂಟಿ ಕೃಷಿನಿರ್ದೇಶಕ ಸಮದ್ ಪಟೇಲ್ ಮಾತನಾಡಿ, 2024-25 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬೆಳೆ ವಿಮೆ ಯೋಜನೆಯಡಿ ರೂ.656.56 ಕೋಟಿ ಬೆಳೆ ವಿಮೆ ರೈತರ ಖಾತೆಗೆ ಜಮೆಯಾಗಿರುತ್ತದೆ. ಅಲ್ಲದೆ 2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 300952 ರೈತರು ಬೆಳೆವಿಮೆ ಯೋಜನೆಯಡಿ ನೊಂದಣಿ ಮಾಡಿಸಿದ್ದು, ಬೆಳೆವಿಮೆ ಮದ್ಯಂತರ ಪರಿಹಾರ ರೂ. 234.73 ಕೋಟಿ ಹಾಗೂ ಸ್ಥಳಿಯ ವಿಕೋಪದಡಿ ರೂ.8.90 ಕೋಟಿ ಬೆಳೆವಿಮೆ ಪರಿಹಾರ ಮಂಜೂರಾಗಿದ್ದು ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ 21 ಪ್ರಗತಿಪರ ರೈತರು/ರೈತ ಮಹಿಳೆಯರಿಗೆ ಕೃಷಿ ಕಾಯಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಕೃಷಿಕ ಸಮಾಜದ ಪ್ರತಿನಿಧಿಗಳು, ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ವಿಜ್ಷಾನಿಗಳು, ರೇಷ್ಮೆ ಇಲಾಖೆ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.