ಕಲಬುರಗಿ| ರಾಜಾಪೂರ ಗ್ರಾಪಂ ಅಧ್ಯಕ್ಷ ಪ್ರಕಾಶರೆಡ್ಡಿ ಸದಸ್ಯತ್ವ ಅನರ್ಹ
ಕಾಳಗಿ: ತಾಲೂಕಿನ ರಾಜಾಪೂರ ಗ್ರಾ.ಪಂ ಅಧ್ಯಕ್ಷ ಪ್ರಕಾಶರೆಡ್ಡಿ ಮಲ್ಲರೆಡ್ಡಿ ಅವರು ವ್ಯಕ್ತಿಯೊಬ್ಬರ ಖಾಲಿ ಜಾಗವನ್ನು ಡಿಸಿಬಿ ವಹಿಯಲ್ಲಿ ದಾಖಲಿಸಲು ಲಂಚ ಪಡೆದ ಆರೋಪ ಸಾಬೀತಾಗಿದ್ದರಿಂದ ಅವರನ್ನು ಗ್ರಾ.ಪಂ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.
ರಾಜಾಪೂರ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶರೆಡ್ಡಿ ಮಲ್ಲರೆಡ್ಡಿ ಅವರು ರಾಜಾಪೂರ ಗ್ರಾಪಂ ವ್ಯಾಪ್ತಿಯ ಮಳಗ(ಕೆ) ಗ್ರಾಮದ ಚಾಂದಸುಲ್ತಾನ ಅವರ ಜಾಗವನ್ನು ನಮೂದಿಸುವ ಕೆಲಸ ಮಾಡಿಸಿಕೊಡಲು 5000 ರೂ. ಲಂಚ ಸ್ವೀಕರಿಸಿದ ಆರೋಪ ಸಾಬೀತಾಗಿರುವುದರಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಗ್ರಾಮ ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕರಣ-43(ಎ) ಮತ್ತು 46(4)ರನ್ವಯ ಗ್ರಾಮ ಪಂಚಾಯಿತಿ ಸದಸ್ಯತ್ವದಿಂದ ತೆಗೆದುಹಾಕಿ ಮತ್ತು ಪ್ರಕರಣ 43(ಎ)(2)ರನ್ವಯ ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಆದೇಶ ಪ್ರಕಟಿಸಿದೆ.