ಕಲಬುರಗಿ | ಛಲ ಇದ್ದರೆ ಗುರಿ ಸಾಧನೆ ಸಾಧ್ಯ: ವಿಜಯಕುಮಾರ ಪಾಟೀಲ
ಕಲಬುರಗಿ: ಪ್ರತಿಯೊಬ್ಬರೂ ಯಶಸ್ವಿ ಜೀವನ ನಡೆಸಬೇಕಾದರೆ ಸಾಧಿಸುವ ಛಲ ಹೊಂದಿರಬೇಕು. ಅಂಥ ದೃಢಸಂಕಲ್ಪ ಇದ್ದಾಗ ಮಾತ್ರ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ವಿಜಯಕುಮಾರ ತೇಗಲತಿಪ್ಪಿ ಹೇಳಿದರು.
ರಾಜ್ಯಮಟ್ಟದ ವಿಶ್ವ ಕನ್ನಡಿಗ ಪ್ರಶಸ್ತಿ ಪಡೆದ ಹಿನ್ನೆಲೆ ರಾಜೇಶ್ವರಿ ಸಾಹು ಅವರಿಗೆ ಕನ್ನಡ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಆದರೆ ಅವಕಾಶಗಳ ಕೊರತೆಯಿಂದ ಅವರು ಹೊರಹೊಮ್ಮಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಅವಕಾಶಗಳನ್ನು ಸ್ವತಃ ಸೃಷ್ಟಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವವರಲ್ಲಿ ರಾಜೇಶ್ವರಿ ಸಾಹು ಮುಂಚೂಣಿಯಲ್ಲಿದ್ದಾರೆ. ಅವರ ಸಾಮಾಜಿಕ ಕಳಕಳಿ, ವೃತ್ತಿ ಬದ್ಧತೆ ಹಾಗೂ ಸೇವಾ ಮನೋಭಾವದಿಂದ ರಾಜ್ಯದಾದ್ಯಂತ ಹೆಸರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಸೇವೆ ದೇಶದಾದ್ಯಂತ ಪಸರಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಶರಣಗೌಡ ಪಾಟೀಲ್, ಪಂಚಾಯತ್ ರಾಜ್ ಇಲಾಖೆಯಲ್ಲಿ ಜನಪರ ಸೇವೆ ಸಲ್ಲಿಸುವ ಮೂಲಕ ರಾಜೇಶ್ವರಿ ಸಾಹು ಉತ್ತಮ ಆಡಳಿತಗಾರರಾಗಿ ಗುರುತಿಸಿಕೊಂಡಿದ್ದಾರೆ. ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಪರಿಶ್ರಮದ ಮೂಲಕ ಸಾಧನೆ ಮಾಡಿರುವುದು ಪ್ರೇರಣಾದಾಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೇಣುಕಾ ಡಾಂಗೆ ಮಾತನಾಡಿದರು. ಮುಖಂಡರಾದ ಸುಭಾಶ ಮುರುಡ, ಬಸವರಾಜ ಬಿರಬಿಟ್ಟೆ ಸೇರಿದಂತೆ ಹಲವರು ಭಾಗವಹಿಸಿದ್ದರು.
ನಂತರ ರಾಜೇಶ್ವರಿ ಸಾಹು ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಸನ್ಮಾನ ಸ್ವೀಕರಿಸಿದ ರಾಜೇಶ್ವರಿ ಸಾಹು ಮಾತನಾಡಿ, ಬಡತನದಲ್ಲಿದ್ದರೂ ಓದನ್ನು ನಿಲ್ಲಿಸದೆ ಪಿಎಸ್‌ಐ ಆಗಬೇಕೆಂಬ ಕನಸು ಕಂಡಿದ್ದೆ. ಆ ಕನಸು ನನಸಾಗದಿದ್ದರೂ ಛಲದಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಇದಕ್ಕೆ ಪಾಲಕರು ಹಾಗೂ ಹಿರಿಯರ ಪ್ರೋತ್ಸಾಹ ಕಾರಣವಾಗಿದೆ ಎಂದು ಸ್ಮರಿಸಿದರು.
ಪ್ರಮುಖರಾದ ಶಿವರಾಜ ಅಂಡಗಿ, ಶರಣರಾಜ ಚಪ್ಪರಬಂದಿ, ಧರ್ಮಣ್ಣ ಎಚ್ ಧನ್ನಿ, ರಾಜೇಂದ್ರ ಮಾಡಬೂಳ ಇತರರಿದ್ದರು.