ಕಲಬುರಗಿ | ವಂದೇ ಮಾತರಂ ಕಡ್ಡಾಯಗೊಳಿಸುವ ಕೇಂದ್ರ ಮಾರ್ಗಸೂಚಿ ಹಿಂಪಡೆಯಲು ರಾಜ್ಯ ಸರಕಾರಕ್ಕೆ ಆಗ್ರಹ
ಕಲಬುರಗಿ: ಸರ್ಕಾರಿ ಕಾರ್ಯಕ್ರಮಗಳು ಹಾಗೂ ಶಾಲಾ ಸಭೆಗಳಲ್ಲಿ ರಾಷ್ಟ್ರಗೀತೆಯ ಜೊತೆಗೆ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸುವ ಕುರಿತು ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ನು ಹಿಂಪಡೆಯಬೇಕು ಎಂದು ಗುಲ್ಬರ್ಗಾ ಜಂಟಿ ಕ್ರಿಯಾ ಸಮಿತಿ ಭಾರತ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಸಮಿತಿಯ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸಂವಿಧಾನದ ಭಾರತದ ಸಂವಿಧಾನದ ಕಲಂ 25 ಪ್ರಕಾರ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಇದೆ. ಆದರೆ ವಂದೇ ಮಾತರಂ ಗೀತೆಯ ಕೆಲವು ಚರಣಗಳಲ್ಲಿ ಭಾರತವನ್ನು ಮಾತೃಭೂಮಿಯ ರೂಪದಲ್ಲಿ ಹಾಗೂ ದುರ್ಗಾ, ಸರಸ್ವತಿ ಮತ್ತು ಲಕ್ಷ್ಮಿ ದೇವಿಯ ಅವತಾರವಾಗಿ ಚಿತ್ರಿಸುವ ಉಲ್ಲೇಖಗಳಿರುವುದರಿಂದ ಅದು ಎಲ್ಲ ಸಮುದಾಯಗಳಿಗೆ ಸಮಾನವಾಗಿ ಸ್ವೀಕಾರಾರ್ಹವಾಗಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಬಹುಧರ್ಮ, ಬಹುಸಾಂಸ್ಕೃತಿಕ ಹಾಗೂ ಜಾತ್ಯಾತೀತ ನೆಲೆಯನ್ನು ಹೊಂದಿರುವ ಭಾರತದಂತಹ ದೇಶದಲ್ಲಿ ಇಂತಹ ಕ್ರಮಗಳು ಕೆಲ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಹುದು ಎಂದು ಸಮಿತಿ ತಿಳಿಸಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ 1937ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ವಿಷಯವನ್ನು ಪರಿಗಣಿಸಿ, ಎಲ್ಲ ಸಮುದಾಯಗಳಿಗೂ ಸ್ವೀಕಾರಾರ್ಹವಾಗುವಂತೆ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಬಳಸುವಂತೆ ನಿರ್ಧರಿಸಿತ್ತು ಎಂದು ಸಮಿತಿ ಹೇಳಿದೆ.
ಸರ್ಕಾರಿ ಕಾರ್ಯಕ್ರಮಗಳು ಮತ್ತು ಶಾಲಾ ಸಭೆಗಳಲ್ಲಿ ಇದನ್ನು ಕಡ್ಡಾಯಗೊಳಿಸುವ ಮೂಲಕ ನಾಗರಿಕರನ್ನು ತಮ್ಮ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವಂತೆ ಒತ್ತಾಯಿಸುವಂತಾಗುತ್ತದೆ. ವಿಶೇಷವಾಗಿ ಶಾಲೆಗಳು ವಿದ್ಯಾರ್ಥಿಗಳಲ್ಲಿ ಏಕತೆ ಮತ್ತು ಸಹಬಾಳ್ವೆಯನ್ನು ಬೆಳೆಸುವ ತಾಣವಾಗಿದ್ದು, ಇಂತಹ ಕ್ರಮಗಳು ವಿಭಜನೆಯ ಭಾವನೆಯನ್ನು ಉಂಟುಮಾಡುವ ಅಪಾಯವಿದೆ ಎಂದು ಸಮಿತಿ ಎಚ್ಚರಿಸಿದೆ.
ಇದೇ ವೇಳೆ ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ಮಸೀದಿ ಎದುರು ಪ್ರಚೋದನಕಾರಿ ಘೋಷಣೆಗಳು ನಡೆದಿದ್ದು, ನಂತರ ಕೋಮು ಉದ್ರಿಕ್ತತೆ ಉಂಟಾಗಿದೆ ಎಂದು ಸಮಿತಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪರಿಸ್ಥಿತಿ ನಿಯಂತ್ರಣದಲ್ಲಿ ವಿಫಲವಾದ ಕಾರಣ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದೆ.
ಹಾಗೆಯೇ ಬಸವಕಲ್ಯಾಣದಲ್ಲಿ ಇಬ್ಬರು ಮದರಸಾ ಶಿಕ್ಷಕರನ್ನು ತಡೆದು “ಜೈಶ್ರೀರಾಮ” ಹೇಳುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ ಪ್ರಕರಣವನ್ನು ಸಮಿತಿ ಖಂಡಿಸಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನಿರಪರಾಧಿಗಳ ಮೇಲೆ ಲಾಠಿಚಾರ್ಜ್ ನಡೆಸಿರುವುದು ಖಂಡನೀಯವಾಗಿದೆ ಎಂದು ಸಮಿತಿ ಹೇಳಿದೆ.
ಬಸವಕಲ್ಯಾಣವು ಶರಣರು ಮತ್ತು ಸೂಫಿ ಸಂತರ ಭಾವೈಕ್ಯತೆಯ ತಾಣವಾಗಿದ್ದು, ಇಂತಹ ಘಟನೆಗಳು ಸಮಾಜದ ಸೌಹಾರ್ದತೆಗೆ ಧಕ್ಕೆ ತರುತ್ತವೆ ಎಂದು ಸಮಿತಿ ತಿಳಿಸಿದೆ. ಹಲ್ಲೆ ನಡೆಸಿದವರನ್ನು ತಕ್ಷಣ ಬಂಧಿಸಬೇಕು ಹಾಗೂ ನಿರಪರಾಧಿಗಳನ್ನು ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗುಲ್ಬರ್ಗಾ ಜಂಟಿ ಕ್ರಿಯಾ ಸಮಿತಿ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಅಫ್ಝಲ್ ಮೆಹಮೂದ್, ಸಮಿತಿಯ ಜಿಲ್ಲಾಧ್ಯಕ್ಷ ಅಬ್ದುಲ್ ಜಬ್ಬಾರ್ ಗೋಳಾ, ಹೋರಾಟಗಾರ್ತಿ ಕೆ.ನೀಲಾ, ಮಹೇಶ್ ಕುಮಾರ್ ರಾಠೋಡ್, ಕಲಬುರಗಿ ಅಭಿವೃದ್ಧಿಪರ ಸಮಿತಿಯ ಅಧ್ಯಕ್ಷ ಲೂಯಿಸ್ ಕೋರಿ, ಹೈದರ್ ಅಲಿ ಬಗ್ಬಾನ್, ಮಹೇಶ್ ಎಸ್. ಬಿ.,ಮೊಹಮ್ಮದ್ ಇಕ್ಬಾಲ್ ಸಾಬ್, ಸಯ್ಯದ್ ತೌಫಿಕ್, ಸದ್ದಾಮ್ ಹುಸೇನ್, ಸಾಜಿದ್ ಅಹ್ಮದ್, ರಿಜ್ವಾನ್ ಸಿದ್ದಿಕಿ, ಡಬ್ಲ್ಯೂಪಿಐ ಮುಖಂಡ ಮುಹಮ್ಮದ್ ಮುಬೀನ್ ಅಹಮದ್, ಶಾಹೀನ್, ನಿಸಾರ್ ಅಹಮದ್, ಮುಹಮ್ಮದ್ ನೂಹ್, ಸಂಧ್ಯಾರಾಜ್ ಸ್ಯಾಮ್ಯುಯೆಲ್, ಗುರುಮಿತ ಸಿಂಗ್ ಸಲುಜಾ, ಸೇರಿದಂತೆ ಹಲವರು ಇದ್ದರು.