×
Ad

ಕಾಳಗಿ | ಗುರುವಂದನೆ ಸಮಾರಂಭದಲ್ಲಿ ಶಿಕ್ಷಕರಿಗೆ ಗೌರವ ಸಮರ್ಪಣೆ

Update: 2026-03-10 19:28 IST

ಕಾಳಗಿ: ತಾಲೂಕಿನ ಸುಂಠಾಣ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಳೆಯ ನೆನಪುಗಳ ಹೊಸ ಕನಸುಗಳ ಸಮ್ಮಿಲನ ಕಾರ್ಯಕ್ರಮ, ಶಾಲಾ ವಾರ್ಷಿಕೋತ್ಸವ, ಬಿಳ್ಕೊಡುಗೆ ಸಮಾರಂಭ ಹಾಗೂ ಗುರುವಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅಕ್ಷರ ಭಿತ್ತಿದ ಗುರುಗಳಿಗೆ ಹಳೆಯ ವಿದ್ಯಾರ್ಥಿಗಳು ಗೌರವ ಸಮರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಚಿಂಚೋಳಿ ಕ್ಷೇತ್ರ ಶಿಕ್ಷಣಾಧಿಕಾರಿ ವ್ಹಿ. ಲಕ್ಷ್ಮಯ್ಯ, ಸುಸಂಸ್ಕೃತ ಹಾಗೂ ಸುಭದ್ರ ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಮಾಜದಲ್ಲಿ ಶಿಕ್ಷಕರನ್ನು ಸಾಕ್ಷಾತ್ ಬ್ರಹ್ಮನಂತೆ ಕಾಣುತ್ತಾರೆ. ಆ ಗೌರವಕ್ಕೆ ತಕ್ಕಂತೆ ಶಿಕ್ಷಕರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಹೇಳಿದರು.

ದೇಶದ ಭವಿಷ್ಯ ಶಾಲೆಗಳ ನಾಲ್ಕು ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತದೆ. ಅದರಲ್ಲಿ ಕೆಲಸ ಮಾಡುವ ಶಿಕ್ಷಕರ ಜವಾಬ್ದಾರಿ ತುಂಬಾ ದೊಡ್ಡದು. ತಾಯಿ ಮಗುವಿಗೆ ಜನ್ಮ ನೀಡಿದರೆ, ಆ ಮಗುವಿನ ಭವಿಷ್ಯ ರೂಪಿಸುವವರು ಶಿಕ್ಷಕರು. ಈ ಅರಿವಿನಿಂದ ಶಿಕ್ಷಕರು ಗಂಭೀರತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಕಲಬುರಗಿ ಕೆಆರ್‌ಐಡಿಎಲ್‌ನ ಎಇಇ ನೀಲಕಂಠ ಆಡೆ ಮಾತನಾಡಿ, ಒಂದು ದೇಶ ಅಭಿವೃದ್ಧಿ ಹೊಂದಲು ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ತಂದೆ-ತಾಯಿ, ಗುರುಗಳು ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ನಡೆಯುವ ವಿದ್ಯಾರ್ಥಿಗಳಿಗೆ ಯಶಸ್ಸು ಖಚಿತವಾಗಿ ಲಭಿಸುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಯಶಸ್ಸಿನ ಮೆಟ್ಟಿಲು ಹತ್ತುವಾಗ ಹಿಂದೆ ತಿರುಗಿ ನೋಡಬಾರದು. ಆದರೆ ಯಶಸ್ಸು ಸಿಕ್ಕ ನಂತರ ತಮ್ಮ ಹಾದಿಯನ್ನು ಹಾಗೂ ಗುರುಗಳ ಕೊಡುಗೆಯನ್ನು ಮರೆಯಬಾರದು. ಈ ಹಿನ್ನೆಲೆಯಲ್ಲಿ ಸುಂಠಾಣ ಹಾಗೂ ಸುಂಠಾಣ ತಾಂಡದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುಂಠಾಣ ಹಾಗೂ ಸುಂಠಾಣ ತಾಂಡದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಾಗೂ ಬೇರೆಡೆ ವರ್ಗಾವಣೆಗೊಂಡ ಶಿಕ್ಷಕರನ್ನು, 2025–26ರಲ್ಲಿ ಶಾಲೆಗೆ ದೇಣಿಗೆ ನೀಡಿದ ಗಣ್ಯರನ್ನು, ಸರ್ಕಾರಿ ನೌಕರರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸುಂಠಾಣ ಯಲ್ಲಾಲಿಂಗ ಆಶ್ರಮದ ಮಲ್ಲಕ್ಕಜ್ಜಪ್ಪ ಮುತ್ಯಾ, ಚಂದ್ರಕಾಂತ ಅಪ್ಪಾಜ್ಜಿ, ಎಸ್'ಡಿಎಮ್'ಸಿ ಅಧ್ಯಕ್ಷ ಸುಂದರ ಕೊರಿ, ಮುಖ್ಯಗುರು ಹಣಮಂತ ಮಂತಟ್ಟಿ, ಸಿಆರ್'ಸಿ ಹಣಮಂತ ‌ಕಾಂಬಳೆ, ಪಿಎಮ್ ಪೋಷಣೆ ಸಹಾಯಕ ನಿರ್ದೇಶಕ ಜಯಪ್ಪ ಚಾಪೇಲ್, ಇಸಿಓ ಮಹಮೂದ್ ಪಠಾಣ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಅನೀಲಕುಮಾರ ಗುತ್ತೇದಾರ, ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕಾಧ್ಯಕ್ಷ ಮಹಾಂತೇಶ ಪಂಚಾಳ, ಮಾಣಿಕರಾವ ಪಾಟೀಲ್, ಸಂತೋಷ ಕಲಮೂಡಕರ್, ಜಗನ್ನಾಥ ಬಂಡಿ, ಗ್ರಾಪಂ ಅಧ್ಯಕ್ಷ ಗೀತಾ ಪ್ರೇಮಕುಮಾರಿ, ಚಂದ್ರಕಾಂತ ಪೂಜಾರಿ, ಲಕ್ಷ್ಮೀ ಸಂತೋಷ ಸೇರಿದಂತೆ ಎಸ್'ಡಿಎಮ್'ಸಿ ಸದಸ್ಯರು ಹಾಗೂ ಪಾಲಕರು, ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿ‌ ಸ್ಮೀತಾ ಯಲ್ಮಡಗಿ ಪ್ರಾರ್ಥಿಸಿದಳು, ಶಿಕ್ಷಕ ರಾಜು ನಾವಿ ಸ್ವಾಗತಿಸಿದರು, ಶಿಕ್ಷಕ ನಾಗರಾಜ ಮಡಿವಾಳ ನಿರೂಪಿಸಿದರು. ಗಂಗಾಧರ ಯೋಗಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News