ಕಲಬುರಗಿ: ನಗರದ ಮಹಾತ್ಮ ಗಾಂಧಿ ಕುಷ್ಠರೋಗಿಗಳ ಕಾಲೋನಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕುಷ್ಠರೋಗ ಅಧಿಕಾರಿಗಳ ಕಾರ್ಯಾಲಯದ ವತಿಯಿಂದ ಶುಕ್ರವಾರ ಭೇಟಿ ನೀಡಿ, ನಿವಾಸಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು.

ಕಾಲೋನಿಯ ಕುಷ್ಠರೋಗಿಗಳು ಹಾಗೂ ಅವರನ್ನು ಅವಲಂಬಿಸಿರುವ ಕುಟುಂಬದ ಸದಸ್ಯರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಾಯಿತು. ಇದೇ ವೇಳೆ ಕಣ್ಣಿನ ಪರೀಕ್ಷೆ ನಡೆಸಿ, ಅಗತ್ಯವಿರುವವರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಅಲ್ಲದೆ, ಕುಷ್ಠರೋಗಿಗಳ ಬಳಕೆಗೆ ಅಗತ್ಯವಿರುವ ವಿಶೇಷ ಪಾದರಕ್ಷೆಗಳು ಹಾಗೂ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು.

ಆರೋಗ್ಯ ತಪಾಸಣೆಯ ಸಂದರ್ಭದಲ್ಲಿ ನಿವಾಸಿಗಳ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ಪಡೆದು, ಅಗತ್ಯ ಆರೋಗ್ಯ ಸೇವೆ ಹಾಗೂ ಮಾರ್ಗದರ್ಶನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ರವಿಕಾಂತಿ ಎಸ್. ಕ್ಯಾತನಾಳ ಹಾಗೂ ನಗರ ಆರೋಗ್ಯ ಕೇಂದ್ರ ಮಾಣಿಕೇಶ್ವರಿ ವೈದ್ಯಾಧಿಕಾರಿ ಡಾ. ಅಮೀರ ಪಾಶಾ ಉಪಸ್ಥಿತರಿದ್ದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ, ನೇತ್ರ ವಿಭಾಗದ ನೇತ್ರಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಹಾಗೂ ಇತರ ಸೇವೆಗಳನ್ನು ಒದಗಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor