Kalaburagi | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ
ಕಲಬುರಗಿ: ಕನಿಷ್ಠ ವೇತನ ಜಾರಿಗೊಳಿಸುವುದು, ಬಾಕಿ ವೇತನ ಪಾವತಿಸುವುದು, ಕೆಲಸದಿಂದ ವಜಾಗೊಂಡಿರುವ ನೌಕರರನ್ನು ಮರುನೇಮಕ ಮಾಡಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಯಿತು.
ಕಳೆದ ಐದು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಕನಿಷ್ಠ ವೇತನದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಾಸ್ಟೆಲ್ ಹಾಗೂ ವಸತಿ ಶಾಲೆಗಳ ಹೊರಗುತ್ತಿಗೆ ನೌಕರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. 2026ರ ಮೇ 22ರಂದು ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆದೇಶ ಹೊರಡಿಸಿದ್ದರೂ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಇದುವರೆಗೆ ಜಾರಿಗೊಳಿಸಿಲ್ಲ ಎಂದು ಅವರು ಆರೋಪಿಸಿದರು.
ಮೂರ್ನಾಲ್ಕು ತಿಂಗಳ ವೇತನ ಬಾಕಿ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಇಂದಿರಾಗಾಂಧಿ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಮೂರರಿಂದ ನಾಲ್ಕು ತಿಂಗಳ ವೇತನ ಬಾಕಿ ಇದೆ. ವೇತನ ಪಾವತಿಯಾಗದೆ ನೌಕರರು ಸಾಲದ ಬಾಧೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಕರಜಗಿ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಸುಮಾರು 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಐವರು ನೌಕರರನ್ನು ಸುಳ್ಳು ಆರೋಪಗಳ ಆಧಾರದ ಮೇಲೆ ಕೆಲಸದಿಂದ ತೆಗೆದುಹಾಕಲಾಗಿದೆ. ಅವರನ್ನು ಕೂಡಲೇ ಮರುನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಹೊಸದಾಗಿ ನೌಕರರನ್ನು ನೇಮಕ ಮಾಡುವ ಸಂದರ್ಭದಲ್ಲಿ ಹಣ ಪಡೆಯಲಾಗುತ್ತಿದೆ ಎಂಬ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಮೈಸೂರಿನ ಶಾರ್ಪ್ ಏಜೆನ್ಸಿಯ ಟೆಂಡರ್ ಅವಧಿ ಮುಗಿದಿದ್ದರೂ ಅದೇ ಏಜೆನ್ಸಿಯನ್ನು ಮುಂದುವರಿಸಲಾಗಿದೆ ಎಂಬ ಆರೋಪದ ಬಗ್ಗೆಯೂ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಬೇಕು. ನೌಕರರಿಗೆ ವಾರಕ್ಕೊಮ್ಮೆ ಕಡ್ಡಾಯ ರಜೆ ನೀಡಬೇಕು. ಹೊರಗುತ್ತಿಗೆ ನೌಕರರಿಗೆ ತಾತ್ಕಾಲಿಕ ನೇಮಕಾತಿ ಆದೇಶ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಹನುಮೇಗೌಡ, ಜಿಲ್ಲಾಧ್ಯಕ್ಷ ಪರಶುರಾಮ ಹಡಲಗಿ, ಜಿಲ್ಲಾಕಾರ್ಯದರ್ಶಿ ಮಮ್ಮದ್ ಜಮೀರೊದ್ದಿನ್ ಬಾಬಾ, ಉಪಾಧ್ಯಕ್ಷರಾದ ಮೇಘರಾಜ ಕಠಾರೆ ಹಾಗೂ ಇಸಮೋದ್ದಿನ್ ಮೀರಾಸಾಬ, ಜಂಟಿ ಕಾರ್ಯದರ್ಶಿ ಹುಲಗಪ್ಪ ಚಲವಾದ, ನಾಗರಾಜ ಕಟ್ಟಿಮನಿ, ಸಹಕಾರ್ಯದರ್ಶಿ ಅಲ್ಲಾ ಪಟೇಲ್ ವಾಡಿ ಸೇರಿದಂತೆ ವಿವಿಧ ತಾಲೂಕುಗಳ ಪದಾಧಿಕಾರಿಗಳು ಹಾಗೂ ನೌಕರರು ಪಾಲ್ಗೊಂಡಿದ್ದರು.