ಎಸ್.ಐ.ಆರ್ ಪರಿಷ್ಕರಣೆ | ನೋಟಿಸ್ ಪಡೆದ ಮತದಾರರ ಮನೆಗಳಿಗೆ ಬಿಎಲ್ಒಗಳ ಭೇಟಿ: ಡಿಸಿ ಇಕ್ರಮ್ ಶರೀಫ್
ಕಲಬುರಗಿ: ವಿಶೇಷ ಸಮಗ್ರ ಪರಿಷ್ಕರಣೆ (SIR) ಸಂದರ್ಭದಲ್ಲಿ ‘ನೋ ಮ್ಯಾಪಿಂಗ್’ ಮತ್ತು ‘ಲಾಜಿಕಲ್ ಡಿಸ್ಕ್ರೆಪೆನ್ಸೀಸ್’ (No Mapping & Logical Discrepancies) ಕಾರಣದಿಂದ ನೋಟಿಸ್ ಪಡೆದ ಮತದಾರರ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ECINetನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ. ಹೀಗಾಗಿ ನೋಟಿಸ್ ಪಡೆದ ಎಲ್ಲ ಮತದಾರರು ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಸಮಕ್ಷಮ ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗವು ಸೆ.26, 2026ರಂದು ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ, ಮತದಾರರ ನೋಂದಣಾಧಿಕಾರಿ ನಿರ್ಧರಿಸುವ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಮತದಾರರು ಅಥವಾ ಮತದಾರರ ಕುಟುಂಬದ ಯಾವುದೇ ವಯಸ್ಕ ಸದಸ್ಯರು ಆನ್‌ಲೈನ್ ಮೂಲಕ ವಿಚಾರಣೆಗೆ ಹಾಜರಾಗಲು ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡಿದೆ. ಅದರಂತೆ ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾತ್ರಿ ಆಶ್ರಯ ತಾಣಗಳಲ್ಲಿ (Night Shelters) ವಾಸಿಸುವವರು, ಕಾರ್ಮಿಕರು, ಬಡವರು, ನಿರ್ಗತಿಕರು ಸೇರಿದಂತೆ ವಿವಿಧ ವರ್ಗಗಳ ಮತದಾರರಿಗೆ ಅಗತ್ಯಕ್ಕೆ ತಕ್ಕಂತೆ ಸಾಕಷ್ಟು ಸಂಖ್ಯೆಯಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮತದಾರರ ಸಹಾಯಕ್ಕಾಗಿ ವಿಶೇಷ ಶಿಬಿರಗಳನ್ನು ಸಹ ಆಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಗೆ (SIR) ನಮೂನೆ-6ರೊಂದಿಗೆ ಲಗತ್ತಿಸಲಾದ ಘೋಷಣೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. SIR ಪರಿಷ್ಕರಣೆ ಇಲ್ಲದ ಸಂದರ್ಭದಲ್ಲಿ ನಿಯಮಗಳ ಪ್ರಕಾರ ಅನ್ವಯವಾಗುವ ನಮೂನೆಗಳನ್ನು ಮತದಾರರ ನೋಂದಣಿ ನಿಯಮಗಳು–1960ರಂತೆ ಬಳಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ECIಯ ಅಧಿಕೃತ ಪೋರ್ಟಲ್‌ನಲ್ಲಿ SIR–2026ಕ್ಕೆ ಸಂಬಂಧಿಸಿದಂತೆ ನೋಟಿಸ್‌ಗೆ ದಾಖಲೆ ಸಲ್ಲಿಸುವ ಹಾಗೂ ಹಿಂದಿನ SIR ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವ ಸೌಲಭ್ಯವೂ ಲಭ್ಯವಿದೆ.