ಕಾಂಗ್ರೆಸ್ ಸರಕಾರದಿಂದ ಮುಸ್ಲಿಮರಿಗೆ ಅನ್ಯಾಯ: ರಾಜಾ ಪಟೇಲ್
ಕಲಬುರಗಿ: ಮುಸ್ಲಿಮರ ಮತಗಳನ್ನು ಬಳಸಿಕೊಂಡಿರುವ ಕಾಂಗ್ರೆಸ್ ಸರಕಾರ ಇದೀಗ ಪುನಃ ನಮಗೆ ದೊಡ್ಡ ಅನ್ಯಾಯ ಮಾಡುತ್ತಿದೆ ಎಂದು ಹೈದ್ರಾಬಾದ್ ಕರ್ನಾಟಕ ಮುಸ್ಲಿಂ ಸಂಘಟನಾ ಕಾರ್ಯದರ್ಶಿ ರಾಜಾ ಪಟೇಲ್ ನದಿಸಿನ್ನೂರ ಹೇಳಿದ್ದಾರೆ.
ನಗರದ ಹಾಗರಗಾ ಕ್ರಾಸ್ ಸಮೀಪದ ಸಭಾ ಫಂಕ್ಷನ್ ಹಾಲ್ ನಲ್ಲಿ ಕರ್ನಾಟಕ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ರವಿವಾರ 'ಕಾಂಗ್ರೆಸ್ ಸರಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು ? ವರದಿ ಹಾಗೂ ಆಗ್ರಹಗಳ ಪರಿಚಯ' ಶೀರ್ಷಿಕೆಯಡಿ ನಡೆದ ಕರ್ನಾಟಕ ಮುಸ್ಲಿಂ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು ಸುಮಾರು ವರ್ಷಗಳ ಬಳಿಕವೂ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯ ಬೆಂಬಲಿಸುತ್ತಿದೆ, ಆದರೆ ಕಾಂಗ್ರೆಸ್ ಕೇವಲ ನಮ್ಮನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದೆ. ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಆದ್ಯತೆ ನೀಡುತ್ತಿಲ್ಲ. ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷಗಳನ್ನು ಮುಗಿಸಿದೆ. ಒಂದೂ ಬೇಡಿಕೆಗಳು ಈಡೇರಿಸಿಲ್ಲ, ಕೊಟ್ಟ ಮಾತುಗಳನ್ನು ಪರಿಗಣಿಸದೆ ಸರಕಾರ ಅನ್ಯಾಯ ಮಾಡುತ್ತಿದೆ. ತನಗೆ ಬೇಕಾದಂತೆ ಉಪಯೋಗಿಸಿ ಬಿಸಾಕುತ್ತಿದೆ. ಒಂದು ವೇಳೆ 2028 ರ ಒಳಗಾಗಿ ನಮ್ಮ ಬೇಡಿಕೆಗಳನ್ನು ಪೂರೈಸದೆ ಇದ್ದರೆ ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.